ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಸಿಆರ್ಪಿಸಿ (CrPC) ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಕೆಡೆಟ್ಗಳ ಪಾಸಿಂಗ್ ಔಟ್ ಪರೇಡ್ನಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದೆ. ಈಗ ಹೊಸ ಆತ್ಮವಿಶ್ವಾಸ ಮತ್ತು ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದಿದ್ದಾರೆ.
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮೂರು ಹೊಸ ಮಸೂದೆಗಳನ್ನು ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ ಅಂಗೀಕರಿಸಲಾಗುತ್ತದೆ. ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. ಮಹಿಳಾ ಐಪಿಎಸ್ ಕೆಡೆಟ್ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ (Narendra Modi )ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ