ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ : ಮುಫ್ತ್ ಬಿಜ್ಲಿ ಯೋಜನೆ ಎಂಬ ಹೊಸ ಯೋಜನೆಯನ್ನು ಘೋಷಿಸಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸೂರ್ಯೋದಯ ಯೋಜನೆಯೇ ಇದಾಗಿದೆ. ಮನೆಯ ಮೇಲ್ಛಾವಣಿಯ ಸೌರಶಕ್ತಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ದೊರೆಯಲಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಹಾಗೂ ಜನರ ಕಲ್ಯಾಣ ಹೆಚ್ಚಿಸಲು ಪಿಎಂ ಸೂರ್ಯ ಘರ್ : ಮುಫ್ತ್ ಬಿಜ್ಲಿ ಯೋಜನೆಯನ್ನು ಜಾರಿ ತರಲಾಗಿದೆ ಎಂದು ತಿಳಿಸಿದ್ದಾರೆ. ಜನರು ಮನೆ ಮೇಲೆಯೇ ಸೌರ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಬಹುದಾಗಿದೆ.
ಒಂದು ಕೋಟಿ ಕುಟುಂಬಗಳಿಗೆ ಯೋಜನೆಯ ಲಾಭ!
ಈ ಉಪಕ್ರಮವು 75 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಹೊಂದಿದ್ದು, ಸುಮಾರು 1 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ. ಮಾಸಿಕ 300 ಯೂನಿಟ್ ಉಚಿತ ವಿದ್ಯುತ್ ಅನ್ನು ಈ ಯೋಜನೆಯ ಫಲಾನುಭವಿ ಕುಟುಂಬಗಳು ಪಡೆಯಲಿವೆ.
ಜನರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪುಗೊಳಿಸಿದ್ದು, ನೇರವಾಗಿ ಜನರ ಬ್ಯಾಂಕ್ ಖಾತೆಗೆ ಸಬ್ಸಿಡಿಯನ್ನು ನೀಡಲು ಮುಂದಾಗಿದೆ, ಜೊತೆಗೆ ಹೆಚ್ಚಿನ ರಿಯಾಯಿತಿಯಲ್ಲಿ ಏಕೀಕೃತ ಬ್ಯಾಂಕ್ ಸಾಲವನ್ನು ನೀಡಲು ಮುಂದಾಗಿದೆ. ಎಲ್ಲ ಸ್ಟೇಕ್ ಹೋಲ್ಡರ್ಗಳನ್ನು ಏಕೀಕೃತ ರಾಷ್ಟ್ರೀಯ ಆನ್ಲೈನ್ ಪೋರ್ಟಲ್ನಲ್ಲಿ ಕೇಂದ್ರಿಕರಿಸಿದ್ದು, ಜನರಿಗೆ ಇದರಿಂದ ಅನುಕೂಲವಾಗಲಿದೆ.
ಈ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಿಗೆ ತಮ್ಮ ಪ್ರದೇಶದಲ್ಲಿ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು. ಜೊತೆಗೆ ಈ ಯೋಜನೆಯು ಆದಾಯವನ್ನು ಹೆಚ್ಚಿಸುವ, ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಮತ್ತು ಉದ್ಯೋಗಾಕಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.
ಸಬ್ಸಿಡಿ ಎಷ್ಟು ಸಿಗಲಿದೆ?
ಕೇಂದ್ರ ಸರ್ಕಾರ ಮೂರು ರೀತಿಯ ಸಬ್ಸಿಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದೆ.
- 150 ಯೂನಿಟ್ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 30 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
- 150 ರಿಂದ 300 ಯೂನಿಟ್ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 60 ಸಾವಿರ ರೂ.ನಿಂದ 78 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
- 300 ಯೂನಿಟ್ಗೂ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 78 ಸಾವಿರ ರೂ. ಸಬ್ಸಿಡಿ ಸಿಗಲಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಹಂತ – 1 : ಕೆಳಗಿನ ಅಂಶಗಳನ್ನು ನಮೂದಿಸಿ
- ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ
- ನಿಮ್ಮ ವಿದ್ಯುತ್ ಸರಬರಾಜು ಕಂಪನಿ ಆಯ್ಕೆ ಮಾಡಿಕೊಳ್ಳಿ
- ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆಯನ್ನು ನಮೂದಿಸಿ
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
- ನಿಮ್ಮ ಇಮೇಲ್ ಅನ್ನು ಹಾಕಿ
- ಬಳಿಕ ಪೋರ್ಟಲ್ನಲ್ಲಿ ತಿಳಿಸಿದಂತೆ ಮುಂದುವರಿಯಿರಿ.
ಹಂತ – 2 :
- ನಿಮ್ಮ ವಿದ್ಯುತ್ ಬಿಲ್ ಗ್ರಾಹಕರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
- ಬಳಿಕ ಸೋಲಾರ್ ರೂಫ್ಟಾಫ್ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ
ಹಂತ – 3 :
- ನಿಮ್ಮ ಅರ್ಜಿಯನ್ನು ನಿಮ್ಮ ಎಸ್ಕಾಂ ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೂ ಕಾಯಿರಿ. ಅನುಮೋದನೆ ಸಿಕ್ಕ ಬಳಿಕ ಎಸ್ಕಾಂನಿಂದ ಅನುಮೋದಿಸಲ್ಪಟ್ಟ ನೋಂದಾಯಿತ ವೆಂಡರ್ಗಳು ಸೋಲಾರ್ ಅನ್ನು ಇನ್ಸ್ಟಾಲ್ ಮಾಡಲಿದ್ದಾರೆ.
ಹಂತ – 4:
ಸೋಲಾರ್ ರೂಪ್ಟಾಪ್ ಇನ್ಸ್ಟಾಲ್ ಆದ ಬಳಿಕ, ನಿಮ್ಮ ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಿ.
ಹಂತ – 5:
ನೆಟ್ ಮೀಟರ್ ಅಳವಡಿಕೆ ಮತ್ತು ನಿಮ್ಮ ಹತ್ತಿರದ ಎಸ್ಕಾಂ ಪರಿಶೀಲಿಸಿದ ಬಳಿಕ ಪೋರ್ಟಾಲ್ನಲ್ಲಿ ಕಮಿಷನಿಂಗ್ ಪ್ರಮಾಣ ಪತ್ರ ಸೃಷ್ಟಿಯಾಗಲಿದೆ.
ಹಂತ – 6:
ಒಂದು ಸಲ ಕಮಿಷನಿಂಗ್ ಪ್ರಮಾಣ ಪತ್ರ ಪಡೆದ ಮೇಲೆ ಪೋರ್ಟಾಲ್ನಲ್ಲಿ ಬ್ಯಾಂಕ್ ಖಾತೆಯ ವಿವರಗಳು ಮತ್ತು ರದ್ಧುಪಡಿಸಿದ ಚೆಕ್ ಅನ್ನು ಅಪ್ಲೋಡ್ ಮಾಡಿ. ಅದಾಗಿ 30 ದಿನಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಬರಲಿದೆ.