ಇರಾನ್ನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಪಾಕಿಸ್ತಾನದಿಂದ ಇರಾಕ್ಗೆ ಹೊರಟಿದ್ದ 35 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದಿಂದ ಇರಾಕ್ಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಇರಾನ್ನ ಯಾಜ್ದ್ ಪ್ರಾಂತ್ಯದಲ್ಲಿ ಉರುಳಿಬಿದ್ದಿದ್ದು, ಕನಿಷ್ಠ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ 53 ಪ್ರಯಾಣಿಕರು ಇದ್ದರು, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರಾಗಿದ್ದಾರೆ. ಇರಾನ್ನ ಸರ್ಕಾರಿ ಸ್ವಾಮ್ಯದ ಐಆರ್ಎನ್ಎ ಸುದ್ದಿ ಸಂಸ್ಥೆ ಪ್ರಕಾರ, ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 18 ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಶಿಯಾ ಯಾತ್ರಿಕರು ಇರಾನ್ನ ಪವಿತ್ರ ನಗರವಾದ ಕೋಮ್ಗೆ ತೆರಳಿದ್ದರು. ಪಾಕಿಸ್ತಾನದಿಂದ ಬಂದ ಯಾತ್ರಿಕರು ಶಿಯಾ ಸಮುದಾಯಕ್ಕೆ ಸೇರಿದವರು. ಈ ದಿನದಂದು ಹೆಚ್ಚಿನ ಸಂಖ್ಯೆಯ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ.
ಬಸ್ನ ಬ್ರೇಕ್ ಸರಿಯಾಗಿ ಹಾಕದಿರುವುದು ಅಪಘಾತಕ್ಕೆ ಕಾರಣವಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ನಂತರ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಯಾಗಳಿದ್ದಾರೆ. ಶಿಯಾ ಯಾತ್ರಿಕರು ಇರಾನ್ನಿಂದ ಇರಾಕ್ಗೆ ಹೋಗುವ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಇಮಾಮ್ ಹುಸೇನ್ ಅವರ ಹುತಾತ್ಮರಾದ 40 ನೇ ದಿನದ ಸ್ಮರಣಾರ್ಥ ಅರ್ಬೈನ್ ಆಚರಣೆಗಾಗಿ ಪ್ರತಿ ವರ್ಷ ಲಕ್ಷಾಂತರ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ.