ಬೆಂಗಳೂರು: ಅಪಾರ್ಟ್ಮೆಂಟ್ವೊಂದರಲ್ಲಿ ಶಾರ್ಟ್ ಸಕ್ಯೂರ್ಟ್ʼನಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ 4 ವರ್ಷದ ಮಗುವೊಂದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಅನೂಪ್ (4 ವರ್ಷ) ಮೃತ ದುರ್ದೈವಿಯಾಗಿದ್ದು, ನೇಪಾಳ ಮೂಲದ ಪೂರಾನ್ ಖಂಡಕ್ ಹಾಗೂ ಇವರ ಪತ್ನಿ ಲಕ್ಷ್ಮೀ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು.
ಘಟನೆ ನಡೆದ ಅಪಾರ್ಟ್ಮೆಂಟ್ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸಹ ಅಪಾರ್ಟ್ಮೆಂಟ್ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿಗೆ ವಾಸ್ತವ್ಯಕ್ಕಾಗಿ ನೆಲಮಹಡಿಯಲ್ಲಿ ಮನೆ ನೀಡಲಾಗಿತ್ತು. ಅಲ್ಲದೇ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯ ಮನೆ ಸಹ ನೀಡಲಾಗಿತ್ತು. ಗಂಡ – ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ – ಪಾಲನೆ ಕಷ್ಟವಾಗಿತ್ತು.
ನಿತ್ಯ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ತಮ್ಮ ಹೊರಗಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಿನ್ನೆಯೂ ಸಹ ಮಗುವನ್ನು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಮಲಗಿರುವಾಗ ನಿನ್ನೆ ಸಂಜೆ ವೇಳೆ ಕಾಣಿಸಿಕೊಂಡ ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್ನಿಂದ ಸಾವನ್ನಪ್ಪಿದೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನ ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.