ಕಠ್ಮಂಡು: ಪೂರ್ವ ನೇಪಾಳದಲ್ಲಿ ಮಾನ್ಸೂನ್ – ಪ್ರಚೋದಿತ ಭೀಕರ ಪ್ರವಾಹ ಮತ್ತು ಭೂಕುಸಿತಗಳು ವಿನಾಶವನ್ನು ಉಂಟಾದ ಪರಿಣಾಮ ಇದುವರೆಗೂ ಐದು ಮಂದಿ ಮೃತ ಪಟ್ಟಿದ್ದು, ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚೈನ್ಪುರ್ ಪುರಸಭೆ-4ರಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್ ಹೆವಾ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಮತ್ತು 21 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಭಾನುವಾರ ಬೆಳಗ್ಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವರದಿಯಾದ ಘಟನೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು “ದೇಶದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ಆಸ್ತಿ ನಷ್ಟದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ಜೊತೆಗೆ ಭದ್ರತಾ ಏಜೆನ್ಸಿಗಳು ಮತ್ತು ರಾಷ್ಟ್ರೀಯ ಸೇವಾ ಸಿಬ್ಬಂದಿಗೆ ನಾಪತ್ತೆಯಾದವರನ್ನು ರಕ್ಷಿಸಲು ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರವಾಹದ ನಂತರ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆಯೇ ಅಥವಾ ಹೇವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬೀರೇಂದ್ರ ಗೋದರ್ ಹೇಳಿದ್ದಾರೆ. ನೆರೆಯ ಪಂಚತಾರ್ ಜಿಲ್ಲೆಯಲ್ಲಿ ಭೂಕುಸಿತದಿಂದ ಮನೆ ಬಿದ್ದು 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಚೈನ್ಪುರದ ಐವರು ಗ್ರಾಮಸ್ಥರು ಕೂಡ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.