ಬೆಂಗಳೂರು: ಕಾಂಗ್ರೆಸ್ ನ 5 ಗ್ಯಾರಂಟಿಗಳು ನಾಡಿನ ಜನತೆಗೆ ಚೈತನ್ಯ ತುಂಬಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಐದು ಗ್ಯಾರಂಟಿಗಳ ಅನುಷ್ಠಾನ ಅಸಾಧ್ಯ ಎಂಬ ಅಭಿಪ್ರಾಯವಿತ್ತು.
ಆದರೆ ಎಲ್ಲೂ ಆರ್ಥಿಕ ಶಿಸ್ತಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಈ ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದು ನಮ್ಮ ಸರ್ಕಾರದ ಹೆಚ್ಚುಗಾಕೆ. ಜನರ ತೆರಿಗೆ ಹಣ ಜನರ ಅಭಿವೃದ್ಧಿಗೆ ವ್ಯಯಿಸಬೇಕು ಎನ್ನುವ ಬದ್ಧತೆಯೊಂದಿಗೆ ಈ ಗ್ಯಾರಂಟಿಗಳು ಜನರಿಗೆ ತಲುಪಲಿವೆ’ ಎಂದು ಘೋಷಿಸಿದ್ದಾರೆ. ಬಿಜೆಪಿಯವರು ನಮ್ಮ 5 ಗ್ಯಾರಂಟಿಗಳ ಬಗ್ಗೆ ಬೀದಿ ಬೀದಿಯಲ್ಲಿ ಅಪಪ್ರಚಾರ ನಡೆಸಿದ್ದರು.
ಜನರಿಗೆ ಪ್ರಚೋದನೆ ನೀಡಿದ್ದರು. ಮತದಾರರಿಗಿಂತಲೂ ಬಿಜೆಪಿಯವರೇ ಗ್ಯಾರಂಟಿಗಾಗಿ ದುಂಬಾಲು ಬಿದ್ದಿದರು. ಈಗ ಈ 5 ಗ್ಯಾರಂಟಿಗಳು ಬಿಜೆಪಿಯವರಿಗೂ ಸಿಗಲಿವೆ. ಇನ್ನು ಮುಂದೆ ಬಿಜೆಪಿ ನಾಯಕರಿಗೂ ಕರೆಂಟ್ ಫ್ರೀ, ಅವರ ಮನೆಯೊಡತಿಗೆ 2 ಸಾವಿರ ರೂ., ಉಚಿತ ಬಸ್ ಪ್ರಯಾಣ ಸಿಗಲಿದೆ’ ಎಂದು ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.