ಸಮಾಜದ ಏಳಿಗೆಗಾಗಿ ಅಗಾಧ ಕೊಡುಗೆ ನೀಡಿದ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಬ್ರಿಟನ್ ನ ಟಿ-4 ಸಂಸ್ಥೆಯು ಮಾಡುತ್ತಿದೆ. ಇದರಲ್ಲಿ ಟಾಪ್-10ರ ಸುತ್ತಿಗೆ ‘ಭಾರತದ ಐದು ಸ್ಫೂರ್ತಿದಾಯಕ ಶಾಲೆ’ಗಳು ಆಯ್ಕೆಯಾಗಿವೆ.
ಮಧ್ಯಪ್ರದೇಶದ ಎರಡು ಶಾಲೆಗಳು, ದೆಹಲಿ, ಮಹಾರಾಷ್ಟ್ರ, ತಮಿಳುನಾಡಿನ ತಲಾ ಒಂದು ಶಾಲೆ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಪ್ರಶಸ್ತಿಯ ಮೊತ್ತ 50 ಸಾವಿರ ಡಾಲರ್ (₹41,76,657) ಇದ್ದು, ಈ ಶಾಲೆಗಳು ಸಮಾನವಾಗಿ ಹಂಚಿಕೊಳ್ಳಲಿವೆ. ‘ಸಮುದಾಯದ ಸಹಭಾಗಿತ್ವ’, ‘ಪರಿಸರ ಕ್ರಿಯಾಯೋಜನೆ’, ‘ಸಂಶೋಧನೆ’, ‘ಪ್ರತಿಕೂಲ ಪರಿಸ್ಥಿತಿಯ ನಿವಾರಣೆ’, ‘ಆರೋಗ್ಯಯುತ ಜೀವನ ನಿರ್ವಹಣೆಗೆ ಪ್ರೋತ್ಸಾಹ’ ವಿಭಾಗಗಳಲ್ಲಿ ಅತ್ಯುತ್ತಮ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.
‘ಕೋವಿಡ್ ಬಳಿಕ ತರಗತಿಯಲ್ಲಿ ಮತ್ತು ಅದರಾಚೆಗಿನ ಜನರ ಜೀವನವನ್ನು ಬದಲಾಯಿಸುವ ಶಾಲೆಗಳಿಗೆ ವೇದಿಕೆಯನ್ನು ನೀಡಿ, ಪ್ರೋತ್ಸಾಹಿಸಲು ಟಿ-4 ಶಿಕ್ಷಣ ಸಂಸ್ಥೆಯು ಪ್ರಶಸ್ತಿ ನೀಡುತ್ತಿದೆ. ‘ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಸಿ.ಎಂ.ರೈಸ್ ಶಾಲೆ, ದೆಹಲಿಯ ವಸಂತ್ಕುಂಜ್ನಲ್ಲಿರುವ ರಾಯನ್ ಇಂಟರ್ನ್ಯಾಷನಲ್ ಸ್ಕೂಲ್, ಮಹಾರಾಷ್ಟ್ರದ ರತ್ಲಾಂ ಜಿಲ್ಲೆಯ ವಿನೋಬಾ ಅಂಬೇಡ್ಕರ್ ನಗರದ ಜಿ.ಎಚ್.ಎಸ್.ಎಸ್, ತಮಿಳುನಾಡಿನ ಮಧುರೈನ ಕಲ್ವಿ ಇಂಟರ್ನ್ಯಾಷನಲ್ ಸ್ಕೂಲ್, ಮುಂಬೈ ಪಬ್ಲಿಕ್ ಸ್ಕೂಲ್ ಎಲ್.ಕೆ.ವಾಗ್ಜಿ ಇಂಟರ್ನ್ಯಾಷನಲ್’ ಶಾಲೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಈ ಶಾಲೆಗಳು ನಾವೀನ್ಯ ಸಂಶೋಧನೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ದು, ಸಾಕಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿವೆ. ಕಲಿಕೆಗೆ ಉತ್ತಮ ವಾತಾವರಣ ರೂಪಿಸಿದ್ದು, ಸರ್ಕಾರಿ ಶಾಲೆಗಳು ಅತ್ಯುತ್ತಮ ಸಾಧನೆ ಮಾಡಿವೆ’ ಎಂದು ಟಿ-4 ಸಂಸ್ಥೆಯ ಸಂಸ್ಥಾಪಕ ವಿಕಾಶ್ ಪೋತಾ ತಿಳಿಸಿದ್ದಾರೆ.