ಬೆಂಗಳೂರು: 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಜನರಿಗೆ ನೀಡಲು ನಿರ್ಧಾರ ಮಾಡಲಾಗಿದೆ. BPL ಕಾರ್ಡ್ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ಮಾಸಿಕ 170 ರೂ. ನೀಡಲಾಗುತ್ತೆ ಎಂದು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಜುಲೈ 1ರಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಅಕ್ಕಿ ಸಿಗುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ನೀಡುತ್ತೇವೆ ಎಂದು ಹೇಳಿದರು.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್, ಅನ್ನಭಾಗ್ಯ ಯೋಜನೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಬಗ್ಗೆ ಸಹ ಚರ್ಚೆ ನಡೆಸಲಾಯಿತು ಎಂದರು.
ಬಳಿಕ 10 ಕೆ.ಜಿ ಅಕ್ಕಿ ಬದಲಿಗೆ 8 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ/ಗೋಧಿ ಅಥವಾ ಜೋಳ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಈ ವೇಳೆ 5 ಕೆ.ಜಿ ಅಕ್ಕಿ ಕೊಟ್ಟು ಇನ್ನೂ 5 ಕೆ.ಜಿ ಅಕ್ಕಿಗೆ ಹಣ ಕೊಡುವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿದರು.