ನವದೆಹಲಿ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸಂಬಂಧಿತ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿರುವ ರೈತರು ಬುಧವಾರದಿಂದ ದೆಹಲಿ ಚಲೋ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರು ಸರ್ಕಾರದ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದರಿಂದ ದೆಹಲಿಯ ಸುತ್ತಲಿನ ಗಡಿಗಳಲ್ಲಿ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ.
ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಈ ಪ್ರಸ್ತಾಪವು ನಮಗೆ ಸ್ವೀಕಾರಾರ್ಹವಲ್ಲ. ಪ್ರತಿಭಟನಾನಿರತ ರೈತರು ಬುಧವಾರದಿಂದ ಶಾಂತಿಯುತ ರೀತಿಯಲ್ಲಿ ದೆಹಲಿ ಕಡೆಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಹೆಸರುಕಾಳು, ಉದ್ದಿನಬೇಳೆ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳಿಗೆ ದೇಶಾದ್ಯಂತ ಎಂಎಸ್ಪಿ ಖಾತರಿ ಕಾನೂನು ನೀಡುವ ಪ್ರಸ್ತಾವನೆಯನ್ನು ಪ್ರತಿಭಟನಾ ನಿರತ ರೈತರ ಮುಂದಿಟ್ಟಿತ್ತು. ರೈತರು ಇದಕ್ಕೆ ಒಪ್ಪಿದ್ದರೆ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಕೇಂದ್ರ ಸರ್ಕಾರದ ನಿಯೋಗ ಹೇಳಿತ್ತು.