ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸದ ಭಾಗವಾಗಿ ಗಯಾನಾದ ಜಾರ್ಜ್ಟೌನ್ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.
ಬ್ರೆಜಿಲ್ನಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಅವರು ಇಂದು ಗಯಾನಾದ ಜಾರ್ಜ್ಟೌನ್ಗೆ ಬಂದಿಳಿದಿದ್ದಾರೆ. ಇದೇ ಸಂದರ್ಭದಲ್ಲಿ ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಸೇರಿದಂತೆ ಇತರೆ ನಾಯಕರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಮೋದಿ ಅವರು ಮೊಹಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೋವಿಡ್- 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಡೊಮಿನಿಕಾ ದೇಶವು ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ..
ಜಾರ್ಜ್ಟೌನ್ನಲ್ಲಿ ನಡೆಯಲಿರುವ ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಡೊಮಿನಿಕಾ ದ್ವೀಪ ರಾಷ್ಟ್ರದ ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡೊಮಿನಿಕಾ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆ ತಿಳಿಸಿದೆ.
‘ಪ್ರಧಾನಿ ಮೋದಿ ಅವರು 2021ರ ಫೆಬ್ರುವರಿಯಲ್ಲಿ ಡೊಮಿನಿಕಾಕ್ಕೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಪೂರೈಸಿದ್ದರು. ಈ ಉದಾರ ಕೊಡುಗೆಯು, ಡೊಮಿನಿಕಾಕ್ಕೆ ಕೆರಿಬಿಯನ್ ನಲ್ಲಿರುವ ತನ್ನ ನೆರೆಯ ದೇಶಗಳಿಗೆ ನೆರವು ನೀಡಲು ಅನುವು ಮಾಡಿಕೊಟ್ಟಿತ್ತು’ ಎಂದಿದೆ.