ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿಯು ಕಳೆದ ಜನವರಿ ತಿಂಗಳಿನಲ್ಲಿ ದಂಡದ ರೂಪದಲ್ಲಿ ಒಟ್ಟು 6 ಲಕ್ಷದ 77 ಸಾವಿರದ 190 ರೂ ಹಣವನ್ನು ಸಂಗ್ರಹಿಸಿದ್ದು, ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಒಟ್ಟು 16,226 ಟ್ರಿಪ್ಗಳನ್ನು ತನಿಖೆ ಮಾಡಿ 3591 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 6,77,190ರೂಗಳನ್ನು ದಂಡ ವಸೂಲಿ ಮಾಡಿ ಹಾಗೂ ಕರ್ತವ್ಯ ಲೋಪ ಆರೋಪದಡಿಯಲ್ಲಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1521 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ 322 ಪುರುಷ ಪ್ರಯಾಣಿಕರಿಂದ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿಟ್ಟ ಆಸನಗಳನ್ನು ಅತಿಕ್ರಮಿಸಿ ಕುಳಿತು ಪ್ರಯಾಣ ಮಾಡುತ್ತಿದ್ದ ಆರೋಪದ ಮೇರೆಗೆ ಒಟ್ಟು 32,200 ರೂ ದಂಡ ಸಂಗ್ರಹಿಸಲಾಗಿದೆ.
ಇನ್ನು ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಇನ್ನು ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಬಿಎಂಟಿಸಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.