ಪ್ಯಾರಿಸ್ ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್ ಕ್ರೀಡಾಕೂಟ ಭರ್ಜರಿಯಾಗಿ ನಡೆಯುತ್ತಿದೆ. ನವ ವಧುವಿನಂತೆ ಸಿಂಗಾರಗೊಂಡಿರೋ ಪ್ಯಾರಿಸ್ ನತ್ತ ಜನ ಸಾಗರವೇ ಹರಿದು ಬರುತ್ತಿದೆ. ಸದ್ಯ ಚೀನಾದ ಶೂಟರ್ ಗಳು ಚಿನ್ನಕ್ಕೆ ಮುತ್ತಿಡುವ ಮೂಲಕ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ.
ಕೋಟ್ಯಾಂತರ ಮಂದಿ ಕಣ್ಮುಂಬಿಕೊಳ್ಳುವ ಈ ಕ್ರೀಡೆಯನ್ನು ಅಲ್ಲಿನ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದೆ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಮಾಡುತ್ತಿರುವ ಪ್ಯಾರಿಸ್ ಓಲಂಪಿಕ್ಸ್ ಸಂಭ್ರಮಕ್ಕೆ ಗಣಪನ ವಾಹನೆ ಇಲಿಗಳೇ ದೊಡ್ಡ ತಲೆ ನೋವಾಗಿದೆ.
ಪ್ಯಾರಿಸ್ಗೂ ಹಾಗೂ ಮೂಷಿಕ ಸಂತತಿಗೂ ಒಂದು ಶತಮಾನಗಳ ನಂಟು ಇದೆ. ಅದನ್ನು ಅತ್ಯಂತ ಜನಪ್ರಿಯ ಱಟೋಟ್ಯೂಲ್ ಅನ್ನೋ ಸಿನಿಮಾದಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಹೀಗಾಗಿ ಒಂದು ಕಡೆ ಪ್ಯಾರಿಸ್ ಒಲಿಂಪಿಕ್ಸ್ನ ಹಬ್ಬದ ಸಂಭ್ರಮದಲ್ಲಿದ್ದರೆ ಮತ್ತೊಂದು ಕಡೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ನಗರ ಪಾಲಿಕೆ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಕೊಂಚವೂ ತೊಂದರೆ ಆಗದಂತೆ ನೋಡಿಕೊಳ್ಳಲು ಈಗ ಸ್ಥಳೀಯ ಪಾಲಿಕೆ ಸಿಬ್ಬಂದಿಗಳು ಇಲಿಗಳ ಬೇಟೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಕ್ರೀಡಾಕೂಟ ಆರಂಭಕ್ಕೂ ಮುನ್ನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಹಿನ್ನೆಲೆಯಲ್ಲಿ ಸಂಭ್ರಮ ನಡೆಯುವ ಸ್ಥಳಗಳನ್ನೆಲ್ಲಾ ಇಲಿಗಳು ಇವೆಯಾ ಇಲ್ಲವಾ ಅನ್ನೋದನ್ನ ನಗರ ಪಾಲಿಕೆ ಸಿಬ್ಬಂದಿ ಪರೀಶಿಲಿಸಿದ್ದಾರೆ.
ಪ್ಯಾರಿಸಿಗರಿಗೆ ಇಲಿಯ ಕಾಟ ದೀರ್ಘಕಾಲದಿಂದಲೂ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಲೇ ಇವೆ. ಪ್ಯಾರಿಸ್ ಸುಮಾರು 60 ಲಕ್ಷ ಇಲಿಗಳು ವಾಸಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಮನುಷ್ಯರಿಗಿಂತಲೂ ಇಲಿಗಳ ಸಂಖ್ಯೆಯೇ ಇಲ್ಲಿ ಜಾಸ್ತಿ ಇವೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದೇಶ ವಿದೇಶಗಳಿಂದ ಜನರು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಿಗಳು ತೊಂದರೆ ಕೊಡದಂತೆ ಎಚ್ಚರಿಕೆ ವಹಿಸಲಾಗಿದೆ.