ಬೆಂಗಳೂರು: ಭಾರತದ ಚುನಾವಣಾ ಆಯೋಗ (Election Commission of India) ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ವಿಶೇಷಚೇತನರಿಗೆ (Disabilities) ಮನೆಯಿಂದಲೇ ಮತದಾನ (Vote From Home) ಮಾಡಲು ಅವಕಾಶ ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಈಗಾಗಲೆ ತಯಾರಿ ಮಾಡಿಕೊಂಡಿದೆ. ಇದರಂತೆ ರಾಜ್ಯಾದ್ಯಂತ 80 ವರ್ಷಕ್ಕಿಂತ ಮೇಲ್ಪಟ್ಟ 60,000 ಜನರು ಮತ್ತು 15,000-20,000 ಜನ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ.
ಮನೆಯಿಂದಲೇ ಮತದಾನ ಮಾಡಲು ಮತದಾರರು ಸಲ್ಲಿದ ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿ ನಂತರ ಮತದಾನಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವ ಬಗ್ಗೆ ನಿರ್ಧರಿಸುತ್ತಾರೆ. ಪಟ್ಟಿಯನ್ನು ಮುಂಚಿತವಾಗಿ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ” ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ .
2023ರ ಮಾರ್ಚ್ವರೆಗೆ ಮತದಾರರ ಪಟ್ಟಿ ಪ್ರಕಾರ ಕರ್ನಾಟಕದಲ್ಲಿ 80-99 ವಯಸ್ಸಿನ 12.2 ಲಕ್ಷ ಜನರಿದ್ದಾರೆ. 5.6 ಲಕ್ಷ ವಿಶೇಷಚೇತನರಿದ್ದು, 16,000 ಕ್ಕೂ ಹೆಚ್ಚು ಶತಾಯುಷಿ ಮತದಾರರಿದ್ದಾರೆ. ಆದರೆ ಕೇವಲ ಶೇ5ರಷ್ಟು ಜನರು ಮಾತ್ರ ಮನೆಯಿಂದಲ್ಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಬೆಂಗಳೂರಿನಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 8,500 ಕ್ಕೂ ಹೆಚ್ಚು ಜನ, 100 ಕ್ಕೂ ಹೆಚ್ಚು ಜನ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.
ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿದವರ ಮನೆಗಳಿಗೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಮತದಾರರ ಭೌತಿಕ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅದೇ ರೀತಿ ಅಂಗವಿಕಲರ ಮನೆಗಳಿಗೆ ಭೇಟಿ ನೀಡಿ ಅವರ ಅಂಗವೈಕಲ್ಯತೆಯ ಪ್ರಮಾಣವನ್ನು ಪರಿಶೀಲಿಸಿದ್ದು, ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ನಂತರ ಇವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದ್ದು, ಇವರ ಮನೆಯಲ್ಲಿಯೇ ಮತದಾನ ಕೇಂದ್ರದ ಮಾದರಿಯನ್ನು ನಿರ್ಮಿಸಲು ಬಿಬಿಎಂಪಿ ಯೋಜಿಸಿದೆ. ಮತದಾನದ ದಿನದಂದು ಮತಗಟ್ಟೆಯ ಅಧಿಕಾರಿಗಳು, ಪ್ರಥಮ ಚುನಾವಣಾಧಿಕಾರಿ, ಪೊಲೀಸ್, ವಿಡಿಯೋಗ್ರಾಫರ್ಗಳು ಅವರ ಮನೆಗಳಿಗೆ ಭೇಟಿ ನೀಡಲಿದ್ದಾರೆ.ಬಿಬಿಎಂಪಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟವರೇ ನಿರ್ಣಯಕ ಮತದಾರರಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ನೀಡಿರುವ ಅವಕಾಶ ಬಳಸಿಕೊಂಡು ಎಲ್ಲರೂ ಮತದಾನ ಮಾಡುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ.