ಧಾರವಾಡ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚುನಾವಣಾ ಅಕ್ರಮ ತಡೆಯಲು ರಾಜ್ಯಾದ್ಯಂತ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅದರಂತೆ ಇದೀಗ ರಾಜ್ಯದಲ್ಲಿ ಇಂದು(ಏ.19) ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನಾಭರಣಗಳು ಜಪ್ತಿಯಾಗಿವೆ. ಹೌದು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ 7 ಕೆ.ಜಿ ಚಿನ್ನ, 40 ಕೆ.ಜಿ ಬೆಳ್ಳಿಯನ್ನ ಜಪ್ತಿ ಮಾಡಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಧಾರವಾಡ ತಾಲೂಕಿನ ತೇಗೂರು ಚೆಕ್ಪೋಸ್ಟ್ನಲ್ಲಿ ಬಿವಿಸಿ ಎಂಬ ಹೆಸರಿನ ಲಾಜಿಸ್ಟಿಕ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ 5 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಲಾಗಿದೆ.
ಬೆಳಗಾವಿಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ. ಪ್ರತಿಷ್ಠಿತ ಚಿನ್ನದ ಅಂಗಡಿಗಳಿಗೆ ಸೇರಿದ ದಾಖಲೆ ಇಲ್ಲದ ಚಿನ್ನವನ್ನ ಪೊಲೀಸರು ಜಪ್ತಿ ಮಾಡಿ, ಆದಾಯ ಮತ್ತು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23 ಕೋಟಿ ಮೌಲ್ಯದ 40 ಕೆ.ಜಿ ಚಿನ್ನ ವಶ
ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23 ಕೋಟಿ ಮೌಲ್ಯದ 40 ಕೆ.ಜಿ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇದನ್ನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಂಟೈನರ್ನಲ್ಲಿ ಸಾಗಿಸಲಾಗುತ್ತಿದ್ದು, ಈ ವೇಳೆ ಚೆಕ್ಪೋಸ್ಟ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.