ದೆಹಲಿ: ”ರಾಜಕೀಯ ವ್ಯವಸ್ಥೆಯಲ್ಲಿ ನಾಯಕರ ಅಥವ ವ್ಯಕ್ತಿ ಆರಾಧನೆ ಮತ್ತು ಭಕ್ತಿಯ ದುಷ್ಪರಿಣಾಮಗಳ ಬಗ್ಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಲವು ವರ್ಷಗಳ ಮೊದಲೇ ಎಚ್ಚರಿಸಿದ್ದರು,” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಸಂದೇಶ ನೀಡಿರುವ ಖರ್ಗೆ, ”ಧರ್ಮದ ಪ್ರಕಾರ ಭಕ್ತಿ ಮೋಕ್ಷಕ್ಕೆ ದಾರಿಯಾಗಿದೆ. ಆದರೆ, ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆ ದೇಶದ ಅವನತಿಗೆ ದಾರಿಯಾಗಲಿದೆ. ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ,” ಎಂಬ ಅಂಬೇಡ್ಕರ್ ಮಾತನ್ನು ಪುನರುಚ್ಚರಿಸಿದ್ದಾರೆ.
ದೇಶಕ್ಕೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆಗಳಿಲ್ಲದೆ ಇದ್ದಿದ್ದರೆ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಧಾನಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
“ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಜನರು ನೀವೇನು ಮಾಡಿದ್ದೀರಿ? ನಿಮ್ಮ ಕೊಡುಗೆ ಏನು? 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ನರೇಂದ್ರ ಮೋದಿ ಕೇಳುತ್ತಲೇ ಇದ್ದಾರೆ. ನಾವು 70 ವರ್ಷಗಳಲ್ಲಿ ಏನೂ ಮಾಡಿರದೆ ಹೋಗಿದ್ದರೆ ಇಂದು ಅವರು ಪ್ರಧಾನಿ ಆಗಿರುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಸಂವಿಧಾನದ ಮೇಲೆ ಆಕ್ರಮಣ
”ಆಡಳಿತರೂಢ ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಸಂವಿಧಾನದ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಆಕ್ರಮಣ ತಡೆಯಲು ದೇಶದ ಜನತೆ ಮುಂದಾಗಬೇಕು,” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಶುಕ್ರವಾರ ಮಾಧ್ಯಮವೊಂದರದಲ್ಲಿ ಬರೆದ ಅಂಕಣದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸೋನಿಯಾ ಗಾಂಧಿ, ”ಧರ್ಮ, ಭಾಷೆ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಜನರ ನಡುವೆ ವಿಷಬೀಜ ಭಿತ್ತಿ ದೇಶ ವಿಭಜಿಸಲು ಮುಂದಾಗಿರುವ ಜನರೇ ನಿಜವಾದ ದೇಶದ್ರೋಹಿಗಳು,” ಎಂದು ಕಿಡಿಕಾರಿದ್ದಾರೆ.
”ಅಂಬೇಡ್ಕರ್ ಅವರ ಪರಂಪರೆಯನ್ನು ನಾವಿಂದು ಗೌರವಿಸಬೇಕಿದೆ. ಸಂವಿಧಾನದ ಯಶಸ್ಸು ಆಡಳಿತದ ಹೊಣೆ ಹೊತ್ತ ಜನರ ನಡವಳಿಕೆ ಅವಲಂಬಿಸಿರುತ್ತದೆ ಎಂಬ ಅಂಬೇಡ್ಕರ್ ನೀಡಿದ್ದ ಎಚ್ಚರಿಕೆಯ ಮಾತನ್ನು ನಾವು ನೆನಪಿಸಿಕೊಳ್ಳಬೇಕು,” ಎಂದು ಸೋನಿಯಾ ಹೇಳಿದ್ದಾರೆ.
”ಆದರಿಂದು ಆಡಳಿತದಲ್ಲಿರುವ ಜನ ಅಧಿಕಾರ ದುರುಪಯೋಗ ಮಾಡಿಕೊಂಡು ಸಂವಿಧಾನದ ನೀತಿ, ತತ್ವಗಳನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ನ್ಯಾಯದ ಅಡಿಪಾಯವನ್ನು ದುರ್ಬಲಗೊಳಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಬದಲು ಕಿರುಕುಳ ನೀಡಲಾಗುತ್ತಿದೆ. ಕಾನೂನನ್ನು ದುರ್ಬಳಕೆ ಮಾಡಿಕೊಂಡು ಬೆದರಿಸಲಾಗುತ್ತಿದೆ. ದೇಶದ ಜನರಿಂದು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಧಿಕಾರದಲ್ಲಿರುವ ನಾಯಕರು ತಮ್ಮ ಆಯ್ದ ಸ್ನೇಹಿತರ ಖಜಾನೆ ತುಂಬಿಸುತ್ತಿದ್ದಾರೆ,” ಎಂದು ಅಂಬಾನಿ-ಅದಾನಿ ಹೆಸರೇಳದೇ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.
”ಜನರ ನಡುವೆ ದ್ವೇಷದ ವಾತಾವರಣ ನಿರ್ಮಾಣ ಮಾಡಲಾಗಿದೆ. ಜನರನ್ನು ಪರಸ್ಪರ ಎತ್ತಿಕಟ್ಟಲಾಗಿದೆ. ಭಾರತೀಯರ ಪರಿಕಲ್ಪನೆಯ ಭ್ರಾತೃತ್ವವನ್ನು ನಾಶ ಮಾಡಲಾಗಿದೆ. ನಿರಂತರ ಟೀಕೆ ಟಿಪ್ಪಣಿ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಸೃಷ್ಟಿಸಿ, ಅನ್ಯಾಯವನ್ನು ಹೆಚ್ಚಿಸಲಾಗುತ್ತಿದೆ,” ಎಂದು ಗುಡುಗಿದ್ದಾರೆ.