ಸಿದ್ದರಾಮಯ್ಯ ಸರಕಾರ ಯಾರಿಗೂ ಮೋಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು. ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 6ನೇ ವೇತನ ಆಯೋಗ ಜಾರಿಗೆ ತಂದಿದ್ದು ಸಹ ನಮ್ಮ ಸರಕಾರ.
7ನೇ ವೇತನ ಆಯೋಗ ಶಿಫಾರಸು ಜಾರಿಗೆ 18 ಸಾವಿರ ಕೋಟಿ ಹಾಗೂ ಒಪಿಎಸ್ ಜಾರಿಗೆ ನೂರಾರು ಕೋಟಿ ರೂ ಬೇಕು.
ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಅದಕ್ಕಾಗಿ ತಾಳ್ಮೆಯಿಂದ ಇರಿ ಎಂದು ಹೇಳಿದರು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ತೆರಿಗೆ ಕಟ್ಟುತ್ತಿವೆ. ಇದಕ್ಕೆ ಅನುಗುಣವಾಗಿ ನಮಗೆ ವಾಪಸ್ ಬರುತ್ತಿಲ್ಲ ಎಂಬ ವಾದವನ್ನು ಕೇಂದ್ರ ಸರಕಾರದ ಮುಂದಿಟ್ಟಿದ್ದೇವೆ. ನಮ್ಮಲ್ಲಾದ ಬದಲಾವಣೆಯಿಂದ ಕರ್ನಾಟಕ ಶಕ್ತಿಯುತವಾಗಿದ್ದು, ಇತರೆ ರಾಜ್ಯಗಳಿಗೂ ಶಕ್ತಿ ನೀಡಲು ಈ ಹಣ ಬಳಕೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿದೆ.
ನಮ್ಮ ರಾಜ್ಯ ಪ್ರಗತಿ ಪಥದಲ್ಲಿದೆ ಎಂಬುದು ಇದರ ಧ್ಯೋತಕ ಎಂದು ಹೇಳಿದ ಪರಮೇಶ್ವರ್, ಅನುದಾನಿತ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧಿಸಿದಂತೆ ಸರಕಾರ ಶೀಘ್ರವೇ ನಿರ್ಧಾರಕ್ಕೆ ಬರಲಿದೆ. ನಾನು ಕೂಡ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಗೌರವಧನ ಸಾಕಾಗುವುದಿಲ್ಲ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಒಪಿಎಸ್ ಜಾರಿಗೆ ಕ್ರಮ ವಹಿಸುತ್ತೇವೆ ಎಂದರು.