ಕೈವ್: ಪೂರ್ವ ಉಕ್ರೇನ್ ನಗರದ ಸ್ಲೋವಿಯನ್ಸ್ಕ್ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ 8 ಜನರು ಸಾವನ್ನಪ್ಪಿದ್ದು, 21 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ ಮೇಲೆ ಏಳು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, S-300 ಕ್ಷಿಪಣಿಗಳು, 10 ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ ಇತರೆ ಸೈಟ್ಗಳನ್ನು ಧ್ವಂಸ ಮಾಡಿವೆ. ಇದರಿಂದಾಗಿ ಕಟ್ಟಡಗಳ ಮಹಡಿಗಳು ಕುಸಿದಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದವರಿಗಾಗಿ ರಕ್ಷಣಾ ತಂಡವು ಶೋಧ ಕಾರ್ಯ ನಡೆಸುತ್ತಿದೆ.
ಈಗಾಗಲೇ ತುರ್ತು ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಅವಶೇಷಗಳನ್ನು ಹೊರತೆಗೆಯುವ ವೇಳೆ 2 ವರ್ಷದ ಮಗುವೊಂದು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಮಗುವನ್ನು ಅವಶೇಷಗಳ ಮಧ್ಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.