ತಿರುವನಂತಪುರಂ: 8 ವರ್ಷದ ಬಾಲಕಿಯೊಬ್ಬಳು (Girl) ಮೊಬೈಲ್ (Mobile) ಬಳಸುತ್ತಿದ್ದ ಸಂದರ್ಭ ಅದು ಸ್ಫೋಟಗೊಂಡು (Explode) ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ (Kerala) ಸೋಮವಾರ ತಡರಾತ್ರಿ ನಡೆದಿದೆ. ಕೇರಳದ ತಿರುವಿಲ್ವಾಮಲದಲ್ಲಿ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಆಕೆ ಸೋಮವಾರ ರಾತ್ರಿ ಸುಮಾರು 10:30ರ ವೇಳೆಗೆ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದಾಗ ಅದು ಸ್ಫೋಟಗೊಂಡಿದೆ.
ಬಾಲಕಿ ಮೊಬೈಲಿನಲ್ಲಿ ವೀಡಿಯೋ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ. ಮೊಬೈಲ್ ಆಕೆಯ ಕೈಯಲ್ಲಿದ್ದಾಗಲೇ ಸ್ಫೋಟಗೊಂಡಿದ್ದರಿಂದ ಆಕೆಗೆ ಗಂಭೀರವಾದ ಗಾಯಗಳಾಗಿತ್ತು. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ. ಆದಿತ್ಯಶ್ರಿ ಸ್ಥಳೀಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.