ಭಾರತ ಮೂಲದ ಅಮೆರಿಕದ ಉದ್ಯಮಿ ರಿಷಿ ಶಾ 8300 ಕೋಟಿ ರೂ. ಹಗರಣದಲ್ಲಿ ಸಿಲುಕಿಕೊಂಡ ಪರಿಣಾಮ ಅಮೆರಿಕದ ಕೋರ್ಟ್ ಅವರಿಗೆ 7.5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪ್ರತಿಷ್ಠಿತ ಜಾಗತಿಕ ಕಂಪನಿಗಳಾದ ಗೋಲ್ಡಮನ್ ಸ್ಯಾಕ್ಸ್ ಗ್ರುಪ್, ಗೂಗಲ್ ಪೇರೆಂಟ್ ಅಲ್ಫಾಬೆಟ್, ಪ್ರಿಟ್ಸ್ಕರ್ ಕಂಪನಿಗಳಿಗೆ ವಂಚನೆ ಮಾಡಿದ ಹಿನ್ನೆಲೆ ರಿಷಿ ಶಾಗೆ ಶಿಕ್ಷೆ ನೀಡಲಾಗಿದೆ.
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿರುವ ರಿಷಿ ಶಾ, 2006ರಲ್ಲಿ ಔಟಕಮ್ ಹೆಲ್ತ್ ಕಂಪನಿ ಸ್ಥಾಪಿಸಿದ್ದರು. ವೈದ್ಯಕೀಯ ಕ್ಷೇತ್ರದ ಜಾಹೀರಾತು ಕಂಪನಿ ಇದಾಗಿದ್ದು, ಬಹುಬೇಗ ವ್ಯಾಪಕವಾಗಿ ಬೆಳೆದಿತ್ತು.
ಹೂಡಿಕೆದಾರರಿಗೆ, ಗ್ರಾಹಕರಿಗೆ ರಿಷಿ ಶಾ 8300 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 2017ರಲ್ಲಿ ರಿಷಿ ಹೂಡಿಕೆದಾರರಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದ್ದವು. ಹೂಡಿಕೆ ಮಾಡಿದ ಕಂಪನಿಗಳು ಶಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ರಿಷಿ ಶಾ ತಪ್ಪೊಪ್ಪಿಕೊಂಡಿದ್ದು, ಕೋರ್ಟ್ ಅವರಿಗೆ 7.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.