ಭಾರತದ ಹಲವು ಕಡೆಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ದರೋಡೆ, ಲೂಟಿ ಮಾಡಿ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಅಮೆರಿಕ ಭಾರತದ ವಶಕ್ಕೆ ನೀಡಿದೆ.
1980ರಲ್ಲಿ ಮಧ್ಯಪ್ರದೇಶದಿಂದ ದರೋಡೆ ಮಾಡಲಾಗಿದ್ದ ಕಲ್ಲಿನ ಮೂರ್ತಿ, 1960ರ ದಶಕದಲ್ಲಿ ರಾಜಸ್ಥಾನದಲ್ಲಿ ಲೂಟಿ ಮಾಡಿದ್ದ ಹಸಿರು ಪದರ ಶಿಲೆ ಸೇರಿದಂತೆ ಇನ್ನೂ ಹಲವು ಪ್ರಾಚೀನ ವಸ್ತುಗಳನ್ನು ಅಮೆರಿಕ ವಾಪಸ್ ಭಾರತಕ್ಕೆ ಹಸ್ತಾಂತರಿಸಿದೆ. ಅಲ್ಲದೆ, ದೇಶದಿಂದ ಲೂಟಿ ಮಾಡಲಾದ 600ಕ್ಕೂ ಅಧಿಕ ಪ್ರಾಚೀನ ವಸ್ತುಗಳನ್ನು ಮುಂದಿನ ತಿಂಗಳಲ್ಲಿ ಮರಳಿ ತರಲು ಕ್ರಮ ಕೈಗೊಳ್ಳಲಾಗಿದೆ.
‘ಭಾರತದ ಕಾನ್ಸುಲೇಟ್ ಜನರಲ್ ಮನೀಶ್ ಕುಲ್ಹರಿ ಹಾಗೂ ನ್ಯೂಯಾರ್ಕ್ ಹೋಮ್
ಲ್ಯಾಂಡ್ ಸೆಕ್ಯೂರಿಟಿ ವಿಭಾಗದ ಮೇಲುಸ್ತುವಾರಿ ಅಲೆಕ್ಸಾಂಡ್ರಾ ಡೆ ಅರ್ಮಾಸ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು’ ಎಂದು ಮ್ಯಾನ್ಹಟನ್ ಡಿಸ್ಟ್ರಿಕ್ಟ್ ಆಟರ್ನಿ ಅಲ್ವಿನ್.ಎಲ್. ಬ್ರಾಗ್ ತಿಳಿಸಿದರು.
‘ಈ ವರ್ಷದಲ್ಲಿ ಭಾರತದಿಂದ ಲೂಟಿ ಆಗಿದ್ದ 600 ಪ್ರಾಚೀನ ವಸ್ತುಗಳು ಸೇರಿದಂತೆ ವಿಶ್ವದ 1 ಸಾವಿರಕ್ಕೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂದಿನ ಕೆಲ ತಿಂಗಳಲ್ಲಿಯೇ ಮರಳಿ ಆಯಾಯ ದೇಶಗಳಿಗೆ ಹಸ್ತಾಂತರಿಸಲಾಗುವುದು’ ಎಂದೂ ಅವರು ಮಾಹಿತಿ ನೀಡಿದರು.