ಪೋಸ್ಟ್ ಆಫೀಸ್ನಲ್ಲಿ ಹಲವು ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿವೆ. ಇವೆಲ್ಲವೂ ಸರ್ಕಾರಿ ಬೆಂಬಲಿತ ಸ್ಕೀಮ್ಗಳಾದ್ದರಿಂದ ವಿಶ್ವಾಸಾರ್ಹ ಮತ್ತು ಸುರಕ್ಷಿತ ಎನಿಸಿವೆ. ಕೆಲ ಸ್ಕೀಮ್ಗಳು ಅಲ್ಪಕಾಲದ ಹೂಡಿಕೆಗೆಂದು ಇವೆ. ಇನ್ನೂ ಕೆಲವು ದೀರ್ಘಕಾಲದ ಹೂಡಿಕೆಗೆ ಹೇಳಿ ಮಾಡಿಸಿದ್ದಿವೆ. ಈ ಮಧ್ಯೆ ಮಾಸಿಕ ಆದಾಯ ಸೃಷ್ಟಿಸುವ ಒಂದು ಸ್ಕೀಮ್ ಅನ್ನು ಇಲ್ಲಿ ಗಮನಿಸಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಥವಾ ಮಂತ್ಲಿ ಇನ್ಕಮ್ ಸ್ಕೀಮ್ ಇದು. ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಒಮ್ಮೆಗೇ ಹಣ ಠೇವಣಿ ಇಟ್ಟು, ನಿಗದಿತ ವರ್ಷಗಳ ಬಳಿಕ ನಿಗದಿತ ಮಾಸಿಕ ಆದಾಯ ತರುತ್ತದೆ.
ಏನಿದು ಯೋಜನೆ?
ಇದರಲ್ಲಿ ಏಕಾಂಗಿಯಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಗಳನ್ನು ತೆರೆಯಬಹುದು. ವೈಯಕ್ತಿಕ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಕನಿಷ್ಠ ಠೇವಣಿ ಅವಧಿ ಐದು ವರ್ಷ. ಈ ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ಮಾಸಿಕ ಆದಾಯದ ರೂಪದಲ್ಲಿ ನಿಮಗೆ ಲಭಿಸುತ್ತದೆ. ಜಂಟಿ ಖಾತೆದಾರರು 15 ಲಕ್ಷ ರೂ.ಗಳನ್ನು ಠೇವಣಿ ಮಾಡುವ ಮೂಲಕ ಮಾಸಿಕ 9,250 ರೂ.ಗಳವರೆಗೆ ಗಳಿಸಬಹುದು. ಇನ್ನು 9 ಲಕ್ಷ ರೂ.ಗಳ ಠೇವಣಿ ಹೂಡುವವರು ಮಾಸಿಕ 5,500 ರೂ. ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಇದರಲ್ಲಿನ ಹೂಡಿಕೆ ಸುರಕ್ಷಿತ.
ಪಿಒಎಂಐಎಸ್ ವೈಶಿಷ್ಟ್ಯ
- ಕನಿಷ್ಠ 1,000 ರೂ. ಹೂಡಿಕೆ ಮೂಲಕ ಖಾತೆ ತೆರೆಯಬಹುದು.
- ಗರಿಷ್ಠ ಹೂಡಿಕೆ ಸಿಂಗಲ್ ಅಕೌಂಟ್ಗೆ 9 ಲಕ್ಷ ರೂ. ಮತ್ತು ಜಾಯಿಂಟ್ ಅಕೌಂಟ್ಗೆ 15 ಲಕ್ಷ ರೂ.
- ಠೇವಣಿಯ ಅವಧಿ 5 ವರ್ಷ.
- ಗರಿಷ್ಠ ಮೊತ್ತದ ಮಿತಿಗೆ ಒಳಪಟ್ಟು ಈ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸಬಹುದು.
- ಒಂದು ವರ್ಷದ ನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. 3 ವರ್ಷಗಳ ಅವಧಿ ಮುಗಿದ ನಂತರ ಖಾತೆಯನ್ನು ಮುಚ್ಚಿದರೆ ಠೇವಣಿಯ ಮೊತ್ತದಿಂದ ಶೇ. 1ರಷ್ಟು ಕಡಿತಗೊಳಿಸಲಾಗುತ್ತದೆ.
- ಸದ್ಯ ಈ ಯೋಜನೆಯಲ್ಲಿ 7.4% ಬಡ್ಡಿ ರ ಲಭ್ಯ.
ಯಾರೆಲ್ಲ ತೆರೆಯಬಹುದು?
- ವಯಸ್ಕರು (ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್).
- ಗರಿಷ್ಠ ಮೂರು ವ್ಯಕ್ತಿಗಳೊಂದಿಗೆ ಜಂಟಿಯಾಗಿ ಖಾತೆ ಹೊಂದಬಹುದು.
- ಅಪ್ರಾಪ್ತ ವಯಸ್ಕ / ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಖಾತೆ ತೆರೆಯಬಹುದು.
- ಜಂಟಿ ಖಾತೆಯಲ್ಲಿನ ಎಲ್ಲರಿಗೂ ಹಣವನ್ನು ಸಮಾನವಾಗಿ ಹಂಚಲಾಗುತ್ತದೆ.
ಇದನ್ನು ಗಮನಿಸಿ
- ಖಾತೆ ತೆರೆದ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರ ಮತ್ತು ಅವಧಿ ಮುಗಿಯುವ (Maturity) ತನಕ ಬಡ್ಡಿಯನ್ನು ಪಾವತಿಸಲಾಗುತ್ತದೆ.
- ಠೇವಣಿ ಇಟ್ಟ 1 ವರ್ಷದೊಳಗೆ ಹಿಂಪಡೆಯಲು ಸಾಧ್ಯವಿಲ್ಲ.
- ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್ಬುಕ್ನೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ ಕ್ಲೋಸ್ ಮಾಡಬಹುದು.
- ಒಂದು ವೇಳೆ ಖಾತೆದಾರನು ಅವಧಿ ಮುಕ್ತಾಯದ ಮುನ್ನವೇ ಮರಣ ಹೊಂದಿದರೆ, ಖಾತೆಯನ್ನು ಮುಚ್ಚಬಹುದು ಮತ್ತು ಮೊತ್ತವನ್ನು ನಾಮಿನಿಗೆ ಮರುಪಾವತಿಸಲಾಗುತ್ತದೆ.
ಯಾವೆಲ್ಲ ದಾಖಲೆಗಳು ಬೇಕು?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ನೋಂದಾಯಿಸಲು ವಿಳಾಸದ ಪುರಾವೆ, ಫೋಟೊ ಇರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಎರಡು ಪಾಸ್ಪೋರ್ಟ್ ಗಾತ್ರದ ಫೋಟೊಗಳೊಂದಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.