ಮೆಲೋಡಿ ಹಿಟ್ ಸಿನಿಮಾಗಳ ಸಂಗೀತ ನಿರ್ದೇಶಕ ವಿ.ಮನೋಹರ್ ಬರೋಬ್ಬರಿ 23 ವರ್ಷಗಳ ಬಳಿಕ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ವಿ.ಮನೋಹರ್ ನಿರ್ದೇಶನದ, ಸತೀಶ್ ಕಥೆ ಬರೆದು ನಿರ್ಮಾಣದ ಜೊತೆಗೆ ನಾಯಕನಾಗಿಯೂ ನಟಿಸಿರುವ ದರ್ಬಾರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಪ್ರೆಸ್ ಮೀಟ್ ಹಮ್ಮಿಕೊಂಡಿದ್ದು ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿ ಮನೋಹರ್, ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್ ಅವರೇ ಕಾರಣ. ನಾನು ಇಂದ್ರಧನುಷ್ ಚಿತ್ರ ಮಾಡಿದ ನಂತರ ಏನೇನೋ ಆಯಿತು. ಅಲ್ಲದೆ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗ್ತಾ ಹೋದೆ. ಸಿನಿಮಾ ಶುರು ಮಾಡ್ಬೇಕಂತ ಬಂದವರು ನಂತರ ಮುಂದುವರಿಯುತ್ತಲೇ ಇರಲಿಲ್ಲ, ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಸತೀಶ್ ಅವರು ನನಗೆ ಹಿಂದೆ ದಿಲ್ದಾರ್ ಟೈಮ್ನಲ್ಲಿ ಸ್ನೇಹಿತರಾಗಿದ್ದರು. ಮೊನ್ನೆ ಮತ್ತೆ ಸಿಕ್ಕಾಗ ಅವರೊಂದು ಕಥೆ ಹೇಳಿದರು. ಅದರಲ್ಲೂ ಪಾಲಿಟಿಕ್ಸ್ ಇತ್ತು. ತುಂಬಾ ಚೆನ್ನಾಗಿ ಕಥೆ ಮಾಡಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್ ಎಂದು ದರ್ಬಾರ್ ಚಿತ್ರವನ್ನು ಆರಂಭಿಸಲು ಸೃಷ್ಟಿಯಾದ ಸಂದರ್ಭವನ್ನು ವಿವರಿಸಿದರು.
ಚಿತ್ರವನ್ನು ಶುರು ಮಾಡುವ ವೇಳೆಗೆ ಕೋವಿಡ್ ಬಂತು. ಎರಡನೇ ಅಲೆಯ ನಂತರ ಚಿತ್ರವನ್ನು ಕಂಪ್ಲೀಟ್ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಚಿತ್ರದ ಬಹುತೇಕ ಶೂಟಿಂಗ್ ನಡೆದಿದೆ. ಅಲ್ಲಿಯ ಜನರೂ ಅಷ್ಟೆ ಚೆನ್ನಾಗಿ ಸಹಕಾರ ನೀಡಿದರು. ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಜಾಹ್ನವಿ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ ೩ ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ, ಚಿತ್ರವೀಗ ಡಿಟಿಎಸ್ ಹಂತದಲ್ಲಿದ್ದು, ಏಪ್ರಿಲ್ ವೇಳೆಗೆ ತೆರೆಗೆ ತರುವ ಯೋಜನೆಯಿದೆ ಎಂದು ವಿವರಿಸಿದರು. ನಂತರ ಚಿತ್ರದ ನಾಯಕ, ನಿರ್ಮಾಪಕ, ಸತೀಶ್ ಮಾತನಾಡುತ್ತ. 2 ದಿನಗಳಲ್ಲಿ ಸೆನ್ಸಾರ್ಗೆ ಹೋಗ್ತಿದ್ದೇವೆ, ನಮ್ಮ ಚಿತ್ರವು ನಿಜವಾಗಿಯೂ ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತದೆ. ವಿ.ಮನೋಹರ್ ಅಂಥವರೊಂದಿಗೆ ಕೆಲಸ ಮಾಡಿದ್ದು ಅದೃಷ್ಟವೇ ಸರಿ. ನಾನು ಹೇಳಿದ್ದನ್ನು ಅವರು ಬರೆಯುತ್ತಿದ್ದುದು ನೋಡಿ ನನಗೆ ಮುಜುಗರವಾಯಿತ್ತು. ಪ್ರತಿ ಪಾತ್ರಕ್ಕೆ ಇಂಥವರೇ ಬೇಕೆಂದು ಸೆಲೆಕ್ಟ್ ಮಾಡಿಕೊಂಡು ನೀವೇ ಮಾಡಿ ಎಂದು ಒತ್ತಾಯಿಸಿ ಮಾಡಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನೂ ಅಭಿನಯಿಸಿದ್ದೇನೆ ಎಂದು ಹೇಳಿದರು.
ನಾಯಕಿ ಜಾಹ್ನವಿ ಮಾತನಾಡಿ ಇದು ನನ್ನ ಮೊದಲ ಚಿತ್ರ. ಮದ್ಯಮ ವರ್ಗದ ಸೈಕಾಲಜಿ ಸ್ಟೂಡೆಂಟ್, ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್ ಮಾಡುತ್ತೇನೆ. ಮೊದಲ ಚಿತ್ರದಲ್ಲೇ ಇಂಥ ದೊಡ್ಡ ಡೈರೆಕ್ಟರ್ ಜೊತೆ ವರ್ಕ್ ಮಾಡೋ ಅವಕಾಶವಿತ್ತು ಎಂದು ಹೇಳಿದರು. ನಟ ಹುಲಿಕಾರ್ತೀಕ್ ಹಾಗೂ ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಕುರಿತಂತೆ ಮಾತನಾಡಿದರು. ಹಳ್ಳಿಯೊಂದರಲ್ಲಿ ನಡೆಯುವ ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ ಮುಖಂಡರು ನಡೆಸುವ ಲಾಭಿ ಇದನ್ನೆಲ್ಲ ದರ್ಬಾರ್ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ, ಜನುಮದ ಜೋಡಿ, ಸೂರ್ಯವಂಶ, ಜೋಡಿಹಕ್ಕಿ ಸೇರಿದಂತೆ ಕನ್ನಡದ ಹಲವಾರು ಸೂಪರ್ ಹಿಟ್ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ವಿ. ಮನೋಹರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು. ಸತೀಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ, ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಉಳಿದ ತಾರಾಬಳಗದಲ್ಲಿ ಸಾಧುಕೋಕಿಲ, ನವೀನ್ ಡಿ ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.