ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ರಾಜ್ಯದ 43 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಶಾಂತಿಯುತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸಮಗ್ರ ವ್ಯವಸ್ಥೆ ಮಾಡಿರುವುದಾಗಿ ಚುನಾವಣಾ ಆಯೋಗ ಹೇಳಿಕೊಂಡಿದೆ
ಇಂದು ಜಾರ್ಖಂಡ್ನ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, 24 ಜಿಲ್ಲೆಗಳ ಒಟ್ಟು 81 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನದ ಕ್ಷೇತ್ರಗಳಲ್ಲಿ 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 20ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 38 ಕ್ಷೇತ್ರಗಳಲ್ಲಿ ಉಳಿದ 528 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಜೆಎಂಎಂ, ಕಾಂಗ್ರೆಸ್, ಆರ್ ಜೆಡಿ ಇದೆ. ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು, ಎಲ್ಜೆಪಿ ಮತ್ತು ಎಜೆಎಸ್ಯು ಒಂದಾಗಿ ಸ್ಪರ್ಧಿಸಲಿವೆ.
ಜಾರ್ಖಂಡ್ ಚುನಾವಣೆಯ ಮೊದಲ ಹಂತದ ಪ್ರಮುಖ ಅಭ್ಯರ್ಥಿಗಳೆಂದರೆ, ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್. ಮೊದಲ ಹಂತದ ಮತದಾನದಲ್ಲಿ ಜೆಮ್ಶೆಡ್ಪುರ ಪಶ್ಚಿಮದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಜಗನ್ನಾಥಪುರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಅಂದರೆ, 8 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆಗಾಗಿ ಚುನಾವಣಾ ಆಯೋಗವು ಸಕಲ ತಯಾರಿ ನಡೆಸಿದೆ. ಜಾರ್ಖಂಡ್ ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 225 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಲಾಗಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1 ಕೋಟಿ 37 ಲಕ್ಷ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಜೆಎಂಎಂ ಪಕ್ಷದಿಂದ ಸಿಎಂ ಪಟ್ಟಕ್ಕೇರಿದ್ದ ಚಂಪೈ ಸೊರೆನ್ ಮುನಿಸಿಕೊಂಡು ಪಕ್ಷ ತೊರೆದು ಬಿಜೆಪಿ ಸೇರಿ ಸರೈಕಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬರ್ಹೈತ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. 2019ರಲ್ಲಿ ಅವರು ಬರ್ಹೈತ್ ಮತ್ತು ದುಮ್ಕಾ ಎಂಬ 2 ಸ್ಥಾನಗಳಿಂದ ಸ್ಪರ್ಧಿಸಿದ್ದರು ಮತ್ತು ಎರಡರಲ್ಲೂ ವಿಜಯಶಾಲಿಯಾಗಿದ್ದರು