ಲಾಯರ್, ಪೊಲೀಸ್, ಡಾನ್, ರೊಮ್ಯಾಂಟಿಕ್, ರಗಡ್ ಹೀಗೆ ಪ್ರತಿಯೊಂದು ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ಬೋಧಕನಾಗೋಕೆ ರೆಡಿಯಾಗಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಹಿಂದೆ ಶಿವರಾಜ್ ಕುಮಾರ್ ಅವರಿಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಎ ಫಾರ್ ಆನಂದ್’ ಹೆಸರು ಇಡಲಾಗಿದ್ದು, ಸಿನಿಮಾದಲ್ಲಿ ಶಿವರಾಜ್ ಕುಮಾರ್ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ‘ಸುಂದರ ಕಾಂಡ’ ಸಿನಿಮಾನಲ್ಲಿ ಶಿವಣ್ಣ ಶಿಕ್ಷಕರಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಶಿವಣ್ಣ ಶಿಕ್ಷಕನಾಗಿ ನಟಿಸಿದ್ದಿಲ್ಲ. ‘ಆರ್ಯನ್’ ಸಿನಿಮಾದಲ್ಲಿ ಶಿವಣ್ಣ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಶಿವಣ್ಣ ಶಿಕ್ಷಕನಾಗಿ ನಟಿಸಲಿದ್ದಾರೆ. ವಿಶೇಷವೆಂದರೆ ಇದು ಒಂದು ಮಕ್ಕಳ ಸಿನಿಮಾ, ಅದರಲ್ಲಿ ಶಿವಣ್ಣ ಶಿಕ್ಷಕನಾಗಿದ್ದಾರೆ. ಅಂದ ಹಾಗೆ ಇದು ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ.
ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಪ್ರಾರಂಭ ಆಗಲಿದೆ.