ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೇ ಕರೆ ಮಾಡಿದ ಕೆಲವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಖ್ಯಾತ ಭೋಜ್ಪುರಿ ನಟಿ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಅಕ್ಷರಾ ಸಿಂಗ್ಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದವರು ಆಕೆಯಿಂದ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಈ ಬಗ್ಗೆ ಡಣಾಪುರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ಎರಡು ವಿಭಿನ್ನ ಸಂಖ್ಯೆಗಳಿಂದ ಅಕ್ಷರಾ ಸಿಂಗ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಹಣ ನೀಡುವಂತೆ ಜೀವಬೆದರಿಕೆ ಹಾಕಿರುವುದಾಗಿ ಲಿಖಿತ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ದಾನಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಶಾಂತ್ ಭಾರದ್ವಾಜ್ ಅವರು ಪಿಟಿಐಗೆ ದೂರು ನೀಡಿದ್ದಾರೆ.
ನಟಿಯ ತಂದೆ ಬಿಪಿನ್ ಸಿಂಗ್ ಈ ಬಗ್ಗೆ ಆಕೆಗೆ ಎರಡು ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಿದೆ, ಕರೆ ಮಾಡಿದವರು ಆಕೆಯನ್ನು ನಿಂದಿಸಿ 50 ಲಕ್ಷ ರೂ. ಹಣವನ್ನು ಬೇಡಿಕೆಯಿಟ್ಟರು. ಮತ್ತು ಎರಡು ದಿನಗಳಲ್ಲಿ ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು, ತಕ್ಷಣ ನಾವು ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ. ದಾನಪುರ ಪೊಲೀಸ್ ಠಾಣೆಯ ತಂಡವು ನಮ್ಮ ಮನೆಗೆ ಭೇಟಿ ನೀಡಿದ್ದು, ಈ ಸಂಬಂಧ ಅಕ್ಷರಾ ಪೊಲೀಸ್ ಸಿಬ್ಬಂದಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ ಎಂದು ಬಿಪಿನ್ ಸಿಂಗ್ ಹೇಳಿದ್ದಾರೆ.
ಭೋಜ್ಪುರಿ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅಕ್ಷರಾ ಸಿಂಗ್ ಒಬ್ಬರು. ಅವರು 2010 ರ ಸಾಹಸ ನಾಟಕ ‘ಸತ್ಯಮೇವ್ ಜಯತೆ’ ನಲ್ಲಿ ರವಿ ಕಿಶನ್ ಎದುರು ನಟನೆಯನ್ನು ಪ್ರಾರಂಭಿಸಿದರು. 2011 ರ ಚಲನಚಿತ್ರ ‘ಪ್ರಾಣ್ ಜಾಯೆ ಪರ್ ವಚನ ನ ಜಾಯೆ’ ನಲ್ಲಿ ಕಾಣಿಸಿಕೊಂಡರು.
2016 ರ ರೋಮ್ಯಾಂಟಿಕ್ ನಾಟಕ ‘ಎ ಬಲ್ಮಾ ಬಿಹಾರ್ ವಾಲಾ’ ನಲ್ಲಿ ಖೇಸರಿ ಲಾಲ್ ಯಾದವ್ ಅವರೊಂದಿಗೆ ಮತ್ತು 2017 ರ ‘ಸತ್ಯ, ತಬಡ್ಲಾ, ಮಾ ತುಜೆ ಸಲಾಮ್’ ನಲ್ಲಿ ಕಾಣಿಸಿಕೊಂಡರು.ಭೋಜಪುರಿ ನಟಿ ಹಾಗೂ ಗಾಯಕಿ ಅಕ್ಷರಾ ಸಿಂಗ್ಗೆ ಅಪಾರ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯದಲ್ಲೂ ಸಾಕಷ್ಟು ಮಂದಿ ಫಾಲೋವರ್ ಗಳನ್ನು ನಟಿ ಹೊಂದಿದ್ದಾರೆ.