ರೇಣುಕಾ ಸ್ವಾಮಿ ಕೊಲೆಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿನ ಚಿಕಿತ್ಸೆಗೆ ಆರು ವಾರಗಳ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ದರ್ಶನ್ಗೆ ಜಾಮೀನು ಸಿಕ್ಕಿ 15 ದಿನಗಳ ಮೇಲಾಗಿದ್ದು ಇದುವರೆಗೂ ಯಾವುದೇ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ದರ್ಶನ್ ಹೊರಗಿದ್ದಷ್ಟು ದಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ದರ್ಶನ್ಗೆ ನೀಡಿದ್ದ ಜಾಮೀನನ್ನು ಪ್ರಶ್ನೆ ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್ ಬೆನ್ನು ನೋವಿನ ಕಾರಣ ಹೇಳಿ ಜಾಮೀನು ಪಡೆದಿದ್ದಾರೆ. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದರು. ಈಗ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ನೀಡಲಾಗಿದೆ.
ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಇದಕ್ಕೆ ಅನುಮತಿ ಕೂಡ ನೀಡಲಾಗಿದೆ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಸುಪ್ರೀಂ ಕೋರ್ಟ್ನಲ್ಲಿ ಪೊಲೀಸರು ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಇದರಿಂದ ದರ್ಶನ್ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ.