ಪಾಕಿಸ್ತಾನ: ಕರಾಚಿ ಮುನ್ಸಿಪಲ್ ಕಾರ್ಪೊರೇಶನ್ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ ಬೀರ್ಬಲ್ ಗೆನಾನಿ ಅವರನ್ನು ಪಾಕ್ ನ ಲಿಯಾರಿ ಎಕ್ಸ್ಪ್ರೆಸ್ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಡಾ ಬೀರ್ಬಲ್ ಗೆನಾನಿ ಅವರು ಸಹಾಯಕ ಡಾ.ಕುರಾತ್-ಉಲ್-ಐನ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಡಾ ಬೀರ್ಬಲ್ ಗೆನಾನಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಸಹಾಯಕ ಡಾ.ಕುರಾತ್-ಉಲ್-ಐನ್ ಅವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಇದು ಉದ್ದೇಶಪೂರ್ವಕ ಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದ್ದು, ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರ ಮೇಲೆ ನಡೆದ ದಾಳಿಯ ಎರಡನೇ ಪ್ರಕರಣ ಇದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.