ಮುಂದಿನ ಐದು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಡಿಜಿಟಪ್ ಪ್ರಸಾರ (ಆನ್ಲೈನ್ ಸ್ಟ್ರೀಮಿಂಗ್) ಹಕ್ಕನ್ನು ಪಡೆದುಕೊಂಡಿರುವ ಜಿಯೋ ಸಿನಿಮಾ, ಐಪಿಎಲ್ 2023 ಟೂರ್ನಿ ಸಲುವಾಗಿ ತನ್ನ ವೀಕ್ಷಕ ವಿವರಣೆಗಾರರ ತಂಡವನ್ನು ಪ್ರಕಟ ಮಾಡಿದೆ. ಜಿಯೊ ಸಿನಿಮಾದ ಎಕ್ಸ್ಪರ್ಟ್ ಪ್ಯಾನೆಲ್ನಲ್ಲಿ ಮಾಜಿ ಸೂಪರ್ ಸ್ಟಾರ್ ಕ್ರಿಕೆಟಿಗರ ದಂಡೇ ಕಾಣಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗೆಳ ನೆಚ್ಚಿನ ಕ್ರೀಡಾ ಹಬ್ಬದ ವಿವರಣೆಯನ್ನು ಕನ್ನಡ ಸಹಿತ ಒಟ್ಟು 12 ಭಾಷೆಗಳಲ್ಲಿ ಜಿಯೋ ಸಿನಿಮಾ ಒದಗಿಸಿಕೊಡಲಿದೆ. ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಕಾಮೆಂಟರಿ ಮತ್ತು ಪಂದ್ಯ ವಿಶ್ಲೇಷಣೆ ಲಭ್ಯವಾಗಲಿದೆ.
ಐಪಿಎಲ್ ಚಾಂಪಿಯನ್ಸ್, ಪ್ರಶಸ್ತಿ ಗೆಲುವಿನ ಮಾರ್ಗದರ್ಶಕರು, ಅಂಕಿ-ಅಂಶಗಳ ಸಾಧಕರು, ಭವಿಷ್ಯದ ಹಾಲ್ ಆಫ್ ಫೇಮರ್ಗಳಾದ ಸುರೇಶ್ ರೈನಾ, ಕ್ರಿಸ್ ಗೇಲ್, ಎಬಿ ಡಿ’ವಿಲಿಯರ್ಸ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಆರ್.ಪಿ ಸಿಂಗ್, ಐಯಾನ್ ಮಾರ್ಗನ್, ಪಾರ್ಥಿವ್ ಪಟೇಲ್ ಮತ್ತು ಸ್ಕಾಟ್ ಸ್ಟೈರಿಸ್ ಅವರು ಜಿಯೋ ಸಿನಿಮಾದ ವೀಕ್ಷಕವಿವರಣೆ ತಂಡದಲ್ಲಿರುವ ಪ್ರಮುಖ ತಾರೆಗಳು. ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್ ಸೇರಿದಂತೆ ಮೊದಲಾದವರು ಎಕ್ಸ್ಟ್ರಾ ಪ್ಯಾನೆಲ್ ಸೇರಿಕೊಳ್ಳಲಿದ್ದಾರೆ.
ಟಾಟಾ ಐಪಿಎಲ್ ವೇಳೆ ಕನ್ನಡದಲ್ಲಿ ವೀಕ್ಷಕವಿವರಣೆ ನೀಡಲಿರುವ ತಂಡದಲ್ಲಿ ಕರ್ನಾಟಕದ ಮಾಜಿ ಕ್ರಿಕೆಟ್ ತಾರೆಯರಾದ ವೆಂಕಟೇಶ್ ಪ್ರಸಾದ್, ಎಸ್. ಅರವಿಂದ್, ಅಮಿತ್ ವರ್ಮ, ಎಚ್. ಶರತ್, ಸುಜಯ್ ಶಾಸ್ತ್ರಿ, ದೀಪಕ್ ಚೌಗಲೆ, ರಾಘವೇಂದ್ರ ರಾಜ್, ಸುಮಂತ್ ಭಟ್ ಹಾಗೂ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ನಿರೂಪಕಿ ರೀನಾ ಡಿಸೋಜಾ, ನಟಿ-ರೂಪದರ್ಶಿ ಹಿತಾ ಚಂದ್ರಶೇಖರ್ ಮತ್ತು ಅಂಕಿತಾ ಅಮರ್ ಕಾಣಿಸಿಕೊಳ್ಳಲಿದ್ದಾರೆ.
“ಐಪಿಎಲ್ 2023 ಟೂರ್ನಿ ಸಲುವಾಗಿ ತಜ್ಞರ ದೊಡ್ಡ ಬಳಗ ಮತ್ತು ದಾಖಲೆ ಸಂಖ್ಯೆಯ ಫೀಡ್ಗಳನ್ನು ಒದಗಿಸುವ ಮೂಲಕ ಹಿಂದೆಂದಿಗಿಂತಲೂ ಅಮೋಘವಾದ ರೀತಿಯಲ್ಲಿ ಲೀಗ್ ಅನ್ನು ಪ್ರಸ್ತುತಪಡಿಸುವ ಕಡೆಗೆ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದೇವೆ. ಈ ಸ್ಟಾರ್ ವೀಕ್ಷಕ ವಿವರಣೆಕಾರರು ಲೀಗ್, ಕ್ರೀಡೆ ಮತ್ತು ಅದರಾಚೆಗಿನ ಎಲ್ಲ ವಿಷಯಗಳನ್ನು ವೀಕ್ಷಕರಿಗೆ ಒಂದೇ ಸ್ಥಳದಲ್ಲಿ ಒದಗಿಸಿಕೊಡಲಿದ್ದಾರೆ. ವೀಕ್ಷಕರ ನೆಚ್ಚಿನ ಕ್ರೀಡಾ ಸಂಭ್ರಮಕ್ಕಾಗಿ ಜಿಯೋ ಸಿನಿಮಾ ಒನ್-ಸ್ಟಾಪ್ ಶಾಪ್ ಆಗಿ ರೂಪುಗೊಂಡಿದೆ. ಅಭಿಮಾನಿಗಳು ನಮ್ಮ ಕೊಡುಗೆಗಳ ಹೃದಯ ಭಾಗದಲ್ಲಿದ್ದಾರೆ ಮತ್ತು ಈ ಪ್ಯಾನೆಲ್ ಜಿಯೋ ಸಿನಿಮಾ ನೀಡುವ ಶ್ರೀಮಂತ ಮತ್ತು ಆಕರ್ಷಕವಾದ ಅನುಭವ ನೀಡಲಿದೆ. ಈ ವಿಶ್ವದರ್ಜೆಯ ಕ್ರೀಡಾಕೂಟದ ಉತ್ಸಾಹ ಮತ್ತು ಕಾತರವನ್ನು ಇದು ಪ್ರತಿಬಿಂಬಿಸುತ್ತದೆ,’ ಎಂದು ಜಿಯೀ ಸಿನಿಮಾ ಮಾಲೀಕತ್ವ ಪಡೆದಿರುವ ವಯಾಕಾಮ್18 ಸ್ಪೋರ್ಟ್ಸ್ ಕಂಟೆಂಟ್ ಮುಖ್ಯಸ್ಥ ಸಿದ್ಧಾರ್ಥ್ ಶರ್ಮ ಹೇಳಿದ್ದಾರೆ.
ಇನ್ಸೈಡರ್ಸ್ ಫೀಡ್, ಲೈಫ್ಸ್ಟೈಲ್ ಫೀಡ್, ಫ್ಯಾಂಟಸಿ ಫೀಡ್ ಮತ್ತು ಫ್ಯಾನ್ಝೋನ್ ಫೀಡ್ ಎಂಬ ನಾಲ್ಕು ಹೆಚ್ಚುವರಿ ಫೀಡ್ಗಳನ್ನು ಐಪಿಎಲ್ನ ಅಧಿಕೃತ ಡಿಜಿಟಲ್ ಪ್ರಸಾರ ಪಾಲುದಾರ ಎನಿಸಿರುವ ಜಿಯೋ ಸಿನಿಮಾ ನೀಡಲಿದೆ. ಈ ಮೂಲಕ ವೀಕ್ಷಕರಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ಆನಂದಿಸುವ ಹೊಸ ಮಾರ್ಗವನ್ನು ಮುಂದಿಡಲಿದೆ.
ಜಿಯೋ ಸಿನಿಮಾ ಒಟ್ಟು 12 ಭಾಷೆಗಳಲ್ಲಿ ವೀಕ್ಷಕವಿವರಣೆಯನ್ನು ಒದಗಿಸಲಿದ್ದು, ಈ ಪೈಕಿ ಆರ್.ಪಿ ಸಿಂಗ್ (ಹಿಂದಿ), ಜೂಲನ್ ಗೋಸ್ವಾಮಿ (ಬೆಂಗಾಲಿ), ಕೇದಾರ್ ಜಾಧವ್ (ಮರಾಠಿ), ದೇಬಾಶಿಶ್ ಮೊಹಾಂತಿ (ಒರಿಯಾ), ಶರಣ್ದೀಪ್ ಸಿಂಗ್ (ಪಂಜಾಬಿ), ಮನ್ಪ್ರೀತ್ ಜುನೇಜಾ (ಗುಜರಾತಿ), ಸಚಿನ್ ಬೇಬಿ (ಮಲಯಾಳಂ), ಹನುಮ ವಿಹಾರಿ (ತೆಲುಗು), ಅಭಿನವ್ ಮುಕುಂದ್ (ತಮಿಳು), ಮೊಹಮದ್ ಸೈಫ್ (ಭೋಜ್ಪುರಿ) ಆಯಾ ಭಾಷೆಗಳ ಪ್ರಮುಖ ವೀಕ್ಷಕ ವಿವರಣೆಕಾರರಾಗಿದ್ದಾರೆ.
ಜಿಯೋ, ಏರ್ಟೆಲ್, ವೀ, ಬಿಎಸ್ಎನ್ಎಲ್ ನೆಟ್ವರ್ಕ್ ಹೀಗೆ ಎಲ್ಲ ನೆಟ್ವರ್ಕ್ಗಳ ಸಬ್ಸ್ಕ್ರೈಬರ್ಗಳಿಗೆ ಜಿಯೋ ಸಿನಿಮಾ ಉಚಿತವಾಗಿ ಲಭ್ಯವಿದೆ. ಮೊದಲ ಆವೃತ್ತಿಯ ಟಾಟಾ ವುಮೆನ್ಸ್ ಪ್ರೀಮಿಯರ್ ಲೀಗ್ ಅಂತ್ಯಕ್ಕೆ ದಾಖಲೆಯ ಸಂಖ್ಯೆಯ ವೀಕ್ಷಕರು ಜಿಯೋ ಸಿನಿಮಾದಲ್ಲಿ ನೋಂದಾಯಿತರಾಗಿದ್ದಾರೆ ಎಂದು ವಯಾಕಾಮ್ 18 ಸಂಸ್ಥೆಯು ಅಧಿಕೃತ ಮಾಹಿತಿ ಹಂಚಿಕೊಂಡಿದೆ.