ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಈ ಬೆನ್ನಲ್ಲೇ ನಟಿ ಹಸೆಮಣೆ ಏರಲು ಸಜ್ಜಾಗಿದ್ದು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಹಿಂದೆ ಕೀರ್ತಿ ಸುರೇಶ್, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಂಚಂದ್ರನ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಮಾತ್ರವಲ್ಲ ಇನ್ನೂ ಕೆಲವು ನಟ, ಕೆಲ ನಿರ್ದೇಶಕರ ಜೊತೆಗೂ ಸಹ ಕೀರ್ತಿ ಸುರೇಶ್ ಹೆಸರು ಕೇಳಿ ಬಂದಿತ್ತು. ಇದೀಗ ಕೊನೆಗೂ ಕೀರ್ತಿ ಸುರೇಶ್ ಮದುವೆ ಫಿಕ್ಸ್ ಆಗಿದೆ.
ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಅವರನ್ನು ವಿವಾಹವಾಗಲಿದ್ದಾರೆ. ಆಂಟೊನಿ ಹಾಗೂ ಕೀರ್ತಿ ಸುರೇಶ್ ಸಹಪಾಠಿಗಳಾಗಿದ್ದು, ಒಟ್ಟಿಗೆ ಹೈಸ್ಕೂಲ್ ಶಿಕ್ಷಣವನ್ನು ಮಾಡಿದವರು. ಆಗಿನಿಂದಲೂ ಇವರು ಪ್ರೀತಿಯಲ್ಲಿದ್ದರಂತೆ. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಈ ಜೋಡಿಯ ವಿವಾಹ ಡಿಸೆಂಬರ್ 11-12 ರಂದು ಗೋವಾನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕುಟುಂಬಸ್ಥರು ಮತ್ತು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಲಿದೆ. ಆ ನಂತರ ಕೊಚ್ಚಿ ಹಾಗೂ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಆಂಟೊನಿ ತಟ್ಟಿಲ್ ಕೊಚ್ಚಿಯವರಾಗಿದ್ದು, ದುಬೈನಲ್ಲಿ ನೆಲೆಗೊಂಡಿದ್ದಾರೆ. ದುಬೈನಲ್ಲಿ ಕೆಲ ಉದ್ಯಮಗಳನ್ನು ಆಂಟೊನಿ ಹೊಂದಿದ್ದು ಇದೀಗ ಆಂಟೊನಿ ಹಾಗೂ ಕೀರ್ತಿ ವಿವಾಹವಾಗಲಿದ್ದಾರೆ.