ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನೂತನ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯಸ್ಥೆಯನ್ನಾಗಿ WWE ಮಾಜಿ ಸಿಇಒ ಲಿಂಡಾ ಮೆಕ್ಮಹೋನ್ ರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಲಿಂಡಾ ಅವರನ್ನು “ಪೋಷಕರ ಹಕ್ಕುಗಳ ಪ್ರಬಲ ವಕೀಲೆ” ಎಂದು ಬಣ್ಣಿಸಿರುವ ಟ್ರಂಪ್, “ನಾವು ಶಿಕ್ಷಣವನ್ನು ಮರಳಿ ರಾಜ್ಯಗಳಿಗೆ ಕಳಿಸಲಿದ್ದೇವೆ ಹಾಗೂ ಈ ಪ್ರಯತ್ನದ ನೇತೃತ್ವವನ್ನು ಲಿಂಡಾ ವಹಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ.
ಲಿಂಡಾ ಜನವರಿಯಲ್ಲಿ ಶ್ವೇತ ಭವನಕ್ಕೆ ಮರಳಲಿರುವ ಡೊನಾಲ್ಡ್ ಟ್ರಂಪ್ ರ ಪರಿವರ್ತನೆ ತಂಡದ ಸಹ ಮುಖ್ಯಸ್ಥೆಯಾಗಿದ್ದಾರೆ. ಈ ತಂಡಕ್ಕೆ ಸರಕಾರದ ಸುಮಾರು 4,000 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ನೀಡಲಾಗಿದೆ.
ಕನೆಕ್ಟಿಕಟ್ ಶಿಕ್ಷಣ ಮಂಡಳಿಯಲ್ಲಿ ಎರಡು ವರ್ಷ ಹಾಗೂ ಖಾಸಗಿ ಕ್ಯಾಥೊಲಿಕ್ ಶಾಲೆಯಾದ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ 16 ವರ್ಷಗಳ ಕಾಲ ಲಿಂಡಾ ಕಾರ್ಯನಿರ್ವಹಿಸಿದ್ದಾರೆ ಎಂದು ಅವರ ಶೈಕ್ಷಣಿಕ ಕ್ಷೇತ್ರದ ಅನುಭವದ ಕುರಿತು ಟ್ರಂಪ್ ಉಲ್ಲೇಖಿಸಿದ್ದಾರೆ.
ಅಮೆರಿಕ ಸೆನೆಟ್ ಗೆ ಸ್ಪರ್ಧಿಸಲು 2009ರಲ್ಲಿ ತರಾತುರಿಯಲ್ಲಿ WWE ತೊರೆದಿದ್ದ ಲಿಂಡಾ, ಟ್ರಂಪ್ ರ ಪ್ರಮುಖ ದಾನಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ನಾನು ಮತ್ತೆ ಶ್ವೇತ ಭವನಕ್ಕೆ ಮರಳಿದರೆ, ಒಕ್ಕೂಟ ಶಿಕ್ಷಣ ಇಲಾಖೆಯನ್ನು ವಿಸರ್ಜಿಸಲಾಗುವುದು ಎಂದು ಟ್ರಂಪ್ ಭರವಸೆ ನೀಡಿದ್ದರು.
2021ರಿಂದ ಟ್ರಂಪ್ ಗೆ ಸಂಬಂಧಿಸಿದ ಅಮೆರಿಕ ಫಸ್ಟ್ ಪಾಲಿಸಿ ಇನ್ಸ್ಟಿಟ್ಯೂಟ್ ನಲ್ಲಿ ಸೆಂಟರ್ ಫಾರ್ ದಿ ಅಮೆರಿಕನ್ ವರ್ಕರ್ ನ ಮುಖ್ಯಸ್ಥೆಯಾಗಿ ಲಿಂಡಾ ಕಾರ್ಯನಿರ್ವಹಿಸುತ್ತಿದ್ದಾರೆ.