ಇತ್ತೀಚೆಗೆ ಸಿನಿಮಾ ವಿಮರ್ಷಕರ ಸಂಖ್ಯೆ ಹೆಚ್ಚುತ್ತಿದೆ. ಚಿತ್ರ ನೋಡಿ ಬಂದು ಸೋಷಿಯಲ್ ಮೀಡಿಯಾದಲ್ಲಿ ವಿಮರ್ಷೆ ತಿಳಿಸುತ್ತಾರೆ. ಈ ವಿಮರ್ಷೆ ನೋಡಿ ಸಾಕಷ್ಟು ಜನ ಥಿಯೇಟರ್ ಗೆ ಎಂಟ್ರಿಕೊಡ್ತಾರೆ. ಆದರಂತೆ ಇತ್ತೀಚೆಗೆ ರಿಲೀಸ್ ಆದ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾಗಳಿಗೆ ಕೆಟ್ಟ ವಿಮರ್ಶೆ ಸಿಕ್ಕವು. ‘ಕಂಗುವ’ ಸಿನಿಮಾ ನೋಡಿ ಬಂದ ಎಲ್ಲರೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದರು. ಸಿನಿಮಾ ನೋಡುತ್ತೇನೆ ಎಂದು ಹೊರಡಬೇಕು ಎಂದುಕೊಂಡಿದ್ದವರಿಗೆ ಈ ವಿಮರ್ಶೆಯಿಂದ ಹಿನ್ನಡೆ ಆಯಿತು. ಇದನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ನಿರ್ಮಾಪಕರ ಸಂಘ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.
ವಿಮರ್ಶೆ ಎಂದರೆ ಸಿನಿಮಾ ಬಗ್ಗೆ ಸಂಪೂರ್ಣ ವಿವರ ಇರಬೇಕು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದಷ್ಟೇ ಹೇಳಲಾಗುತ್ತದೆ. ಈ ರೀತಿಯ ವಿಮರ್ಶೆಗಳಿಂದಲೇ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾ ಹಿನ್ನಡೆ ಅನುಭವಿಸಿತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಕಾರಣಕ್ಕೆ ತಮಿಳು ನಿರ್ಮಾಪಕರ ಸಂಘದವರು ಥಿಯೇಟರ್ ಮುಂಭಾಗದಲ್ಲಿ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಿದ್ದಾರೆ. ಇದರ ಪ್ರಕಾರ ಯಾರೂ ಥಿಯೇಟರ್ ಬಳಿ ಮೈಕ್ ಹಿಡಿದು ಬರುವಂತಿಲ್ಲ.
‘ಈ ರೀತಿಯ ವಿಮರ್ಶೆಗಳು ಸಿನಿಮಾಗೆ ತೊಂದರೆ ಮಾಡುತ್ತವೆ. ಈ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ’ ಎನ್ನುವ ಅಭಿಪ್ರಾಯವನ್ನು ನಿರ್ಮಾಪಕರ ಕೌನ್ಸಿಲ್ ನೀಡಿದೆ. ಇದಕ್ಕೆ ಯೂಟ್ಯೂಬರ್ಗಳು ವಿರೋಧ ವ್ಯಕ್ತಪಡಿಸಿದ್ದಾರೆ.