ಬೆಂಗಳೂರು: ಒಕ್ಕಲಿಗ ಹೆಣ್ಣು ಮಗಳ ಬಗ್ಗೆ ಮಾತನಾಡಿದ್ದರೆ ಜೀವ ಬಿಡಲು ಸಿದ್ಧ ಡಿ ಕೆ ಸುರೇಶ್ಗೆ ಮುನಿರತ್ನ ಸವಾಲ್ ಹಾಕಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರದ ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು,ನೆಲ ಜಲ ಭಾಷೆಗೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಯಾವ ಕಾರಣಕ್ಕೂ ಇಂತಹ ದ್ರೋಹದ ಕೆಲಸ ನಾನು ಮಾಡಲ್ಲ. ಅವರಂತೆ ನಾನು ನೀಚತನದ ರಾಜಕಾರಣ ಮಾಡಲ್ಲ. ಕಟ್ ಮಾಡಿದ ವಿಡಿಯೋ ವೈರಲ್ ಮಾಡಲಾಗುತ್ತಿದೆ. ನನ್ನ ಮಾತಿನಲ್ಲಿ ಒಕ್ಕಲಿಗ ಹೆಣ್ಣುಮಗಳ ಎನ್ನುವ ಪದ ಬಳಕೆಯಾಗಿರುವುದನ್ನು ತೋರಿಸಿದಲ್ಲಿ ರಾಜಕೀಯವನ್ನೇ ಏಕೆ ಜೀವವನ್ನೇ ಬಿಡಲು ಸಿದ್ಧ. ಆರೋಪ ಸಾಬೀತುಪಡಿಸದೇ ಇದ್ದಲ್ಲಿ ಸಂಸದ ಡಿ ಕೆ ಸುರೇಶ್ ರಾಜೀನಾಮೆ ನೀಡ್ತಾರಾ? ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆರೋಪಕ್ಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.
ಅವರು ಕಟ್ ಮಾಡಿ ವಿಡಿಯೋ ವೈರಲ್ ಮಾಡಿದ್ದಾರೆ. ಲೋಕಸಭಾ ಸದಸ್ಯರು ನನಗೆ ಸಂಬಂಧಪಟ್ಟಂತೆ ಕೆಲ ಪದ ಬಳಕೆ ಮಾಡಿದ್ದಾರೆ. ಡಿ ಕೆ ಸುರೇಶ್ ಮೇಲೆ ನನಗೆ ಬಹಳ ಗೌರವವಿದೆ. ಏಳು ವರ್ಷಗಳ ಕಾಲ ಅವರ ಜತೆಯಲ್ಲಿ ಇದ್ದೆ. ಅವರ ಜತೆ ಇದ್ದಾಗ ಐದು ಭಾಷೆಯಲ್ಲಿ ಮಾತನಾಡಿಸಿದ್ದಾರೆ ಎಂದರು. ತೆಲುಗು, ತಮಿಳು, ಉರ್ದು ಭಾಷೆಯಲ್ಲಿ ಮಾತನಾಡಿದ್ದೆ. ಆ ಮೂಲಕ ಮತ ಬರುತ್ತದೆ ಅಂತ ಅವರೇ ಹೇಳಿದ್ದರು. ನನಗೆ ಎಲ್ಲಾ ಭಾಷೆ ಬರುತ್ತದೆ. ನಾನು ಬಿಜೆಪಿಗೆ ಬಂದ ಮೇಲೆ ಇವರು ಸಣ್ಣಮಟ್ಟಕ್ಕೆ ಇಳಿಯುತ್ತಿದ್ದಾರೆ. ಕೆಳಮಟ್ಟದ ರಾಜಕಾರಣ ಸುರೇಶ್ಗೆ ಒಳ್ಳೆಯದಲ್ಲ. ನಿಮ್ಮ ವಕ್ರದೃಷ್ಟಿ ಬೆಂಗಳೂರಿನ ಮೇಲೆ ಬೀರುವುದು ಬೇಡ. ಬೆಂಗಳೂರು ಶಾಂತಿಯುತವಾಗಿದೆ. ಇಲ್ಲಿ ಜಾತಿ ತರಬೇಡಿ. ಜಾತಿ, ಭಾಷೆ ರಾಜಕಾರಣಕ್ಕೆ ತರಬೇಡಿ ಎಂದು ಸಂಸದ ಡಿಕೆ ಸುರೇಶ್ ವಿರುದ್ಧ ಮುನಿರತ್ನ ಹರಿಹಾಯ್ದರು.