ಬಳ್ಲಾರಿ: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದ ಘಟನೆ ಗುರುವಾರ ನಡೆದಿದೆ. ಹಲವು ದಿನಗಳಿಂದ ಬೆಣಕಲ್ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ಇರದ ಕಾರಣ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಸಮಸ್ಯೆ ಆಗಿದೆ. ಇದರಿಂದ ಶೈಕ್ಷಣಿಕವಾಗಿ ಪೆಟ್ಟು ಬೀಳುತ್ತಿದೆ.
ಸಾಕಷ್ಟು ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ಕಾಲೇಜು ತೊರೆಯುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರಿಗೆ ಘಟಕದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿ ಸಾಕಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸದ ಕಾರಣ ಬೇಸತ್ತು ಶಾಲಾ ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇವೆ ಎಂದು ಅಲವತ್ತುಕೊಂಡರು.
ಮನವಿ ಆಲಿಸಿದ ಎಡಿಸಿ ಮಹ್ಮದ್ ಜುಬೇರ್ ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳಾದ ಅಶ್ವಿನಿ, ತ್ರೀವೇಣಿ, ರವಿ ತೇಜ, ತಿರುಮಲ, ಶಿವಕುಮಾರ್, ಸರ್ಪಲಿಂಗ್, ಶಾಂತಿ ಸೇರಿ ಇತರರು ಇದ್ದರು.