ಧಾರವಾಡ: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಹುಬ್ಬಳ್ಳಿ-ಧಾರವಾಡ (Hubballi-Dharwad) ಪಶ್ಚಿಮ ಕ್ಷೇತ್ರ ಬೆಲ್ಲದ್ ಹಾಗೂ ಮೋರೆ ಕುಟುಂಬಗಳಿಗೇ ಮಣೆಹಾಕುತ್ತಾ ಬಂದಿದೆ. ಈ ಪೈಕಿ ಬೆಲ್ಲದ ಕುಟುಂಬವೇ ಹೆಚ್ಚಿನ ಗೆಲುವು ಸಾಧಿಸಿದೆ.
ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಪಡೆದ ಮೇಲೆ ಅವರ ಮಗನೇ ಎರಡು ಬಾರಿ ಶಾಸಕರಾಗಿದ್ದಾರೆ. ಹಾಗಾದ್ರೆ ಬೆಲ್ಲದ್ ಹಾಗೂ ಮೋರೆ ಕುಟುಂಬ ಎಷ್ಟು ಬಾರಿ ಇಲ್ಲಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
1983 ರಲ್ಲಿ ಮಾಜಿ ಸಚಿವ ಎಸ್.ಆರ್ ಮೋರೆ (SR More) ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾದರು. ನಂತರ 1985ರ ಚುನಾವಣೆಯಲ್ಲಿ (Elections) ಚಂದ್ರಕಾಂತ ಬೆಲ್ಲದ್ ಮೊದಲ ಬಾರಿಗೆ ಪಕ್ಷೇತರರಾಗಿ ಗೆಲುವು ಸಾಧಿಸಿದರು. ಇದೇ ಕ್ಷೇತ್ರದಲ್ಲಿ 1989ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ್ ಅವರನ್ನ ಸೋಲಿಸಿದ ಎಸ್.ಆರ್ ಮೋರೆ ಕಾಂಗ್ರೆಸ್ ಪಕ್ಷದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದರಿಂದ ಮತ್ತೆ 2ನೇ ಬಾರಿಗೆ ಮೋರೆಗೆ ಮಣಿಸಲು 1994ರಲ್ಲಿ ಚಂದ್ರಕಾಂತ ಬೆಲ್ಲದ್ ಬಿಜೆಪಿ ಸೇರಿ, ಪಕ್ಷದಿಂದ ಗೆದ್ದು ಶಾಸಕರಾದರು.
ಹೀಗೆ ಪ್ರತಿ ಚುನಾವಣೆಯಲ್ಲಿ ಎಸ್.ಆರ್ ಮೋರೆ ಒಮ್ಮೆ ಗೆದ್ದರೆ, ಚಂದ್ರಕಾಂತ ಬೆಲ್ಲದ್ ಮತ್ತೊಮ್ಮೆ ಗೆದ್ದು ಬರುವ ಮೂಲಕ ಈ ಕ್ಷೇತ್ರ ಎರಡೇ ಕುಟುಂಬದ ಗೆಲುವಿಗೆ ಸೀಮಿತವಾಗಿದೆ. ಚಂದ್ರಕಾಂತ ಬೆಲ್ಲದ್ ಈ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದರೆ, ಎಸ್.ಆರ್ ಮೋರೆ 3 ಬಾರಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ.
ಇದಾದ ಬಳಿಕ 2013ರ ಚುನಾವಣೆಗೆ ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರವೂ ಅದೇ ಕುಟುಂಬದ ಆಡಳಿತ ಮುಂದುವರಿದಿದೆ. ಏಕೆಂದರೆ 2013 ಚುನಾವಣಾ ರಾಜಕಾರಣದಿಂದ ಚಂದ್ರಕಾಂತ ಬೆಲ್ಲದ್ ಹಿಂದೆ ಸರಿದ ನಂತರ, ತನ್ನ ಮಗನಾದ ಅರವಿಂದ ಬೆಲ್ಲದ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಲಾಯಿತು. ಅರವಿಂದ ಬೆಲ್ಲದ್ ಭರ್ಜರಿ ಗೆಲುವು ಸಾಧಿಸಿದರು. ಚಂದ್ರಕಾಂತ ಬೆಲ್ಲದ್ ಎದುರು ಸೋತಿದ್ದ ಎಸ್.ಆರ್ ಮೋರೆ, 2013 ರಲ್ಲಿ ಮಗ ಅರವಿಂದ ಬೆಲ್ಲದ್ (Arvind Bellad) ವಿರುದ್ಧವೂ ಸೋತರು. ಈ ಬೆಳವಣಿಗೆ ನಂತರ 2018ರಲ್ಲಿ ಕಾಂಗ್ರೆಸ್ ಎಸ್.ಆರ್ ಮೋರೆ ಅವರಿಗೆ ಟಿಕೆಟ್ ನಿರಾಕರಿಸಿತು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ರಾಜಕೀಯ ಹಿನ್ನೋಟ ನೋಡುತ್ತಾ ಹೋದರೆ, ಈ ಎರಡೇ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದಿರುವುದು ಕಾಣುತ್ತದೆ.
2023ರ ವಿಧಾನಸಭಾ ಚುನಾವಣೆಯಲ್ಲೂ ಅರವಿಂದ ಬೆಲ್ಲದ್ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಇತ್ತ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಎಸ್.ಆರ್ ಮೋರೆ ಅವರ ಮಗಳು ಕೀರ್ತಿ ಮೋರೆ ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರಿಗೂ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಮತ್ತೊಮ್ಮೆ ಈ ಕ್ಷೇತ್ರ ಬೆಲ್ಲದ್ ವರ್ಸಸ್ ಮೋರೆಯಾಗಲಿದೆ.