ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಮನಸ್ತಾಪ ಮೂಡಿದೆ. ಇದೇ ಕಾರಣಕ್ಕೆ ಇಬ್ಬರು ದೂರ ದೂರ ವಾಸವಾಗಿದ್ದು ಸದ್ಯದಲ್ಲೇ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ಶುರುವಾಗಿ ಕೆಲ ತಿಂಗಳೆ ಕಳೆದಿದೆ. ಆದರೆ ಇದುವರೆಗೂ ಐಶ್ ಅಥವಾ ಬಚ್ಚನ್ ಕುಟುಂಬವಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಇದೀಗ ಅಮಿತಾಭ್ ಬಚ್ಚನ್ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.
ಅಮಿತಾಭ್ ಬಚ್ಚನ್ ಇದೀಗ ಹೊಸ ಬ್ಲಾಗ್ ಬರೆದುಕೊಂಡಿದ್ದಾರೆ. ಇದರಲ್ಲಿ ಅವರು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಏಕೆಂದರೆ ಅದು ಖಾಸಗಿ ವಿಚಾರ. ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ. ಪರಿಶೀಲನೆ ಮಾಡದೇ ಇರುವ ವಿಚಾರ ಅಸತ್ಯವೇ’ ಎಂದಿದ್ದಾರೆ.
‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನ್ನ ಗಮನ ಕುಟುಂಬದ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ಸಂಸಾರದಲ್ಲಿ ಸಮಸ್ಯೆ ಇದೆಯೇ ಎನ್ನುವ ವಾಕ್ಯವನ್ನು ಪ್ರಶ್ನೆ ಹಾಕಿ ಬರೆಯಲಾಗುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ ಅಮಿತಾಭ್ ಬಚ್ಚನ್.
‘ನಿಮಗೆ ಏನಿಷ್ಟವೋ ಅದನ್ನು ಬರೆದುಕೊಳ್ಳಿ. ನೀವು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರೆದಾಗ ನೀವು ಬರೆದಿದ್ದೂ ಪ್ರಶ್ನೆ ಆಗಬಹುದು. ಇದನ್ನು ಅವರು ನಂಬುತ್ತಾರೆ ಮತ್ತು ಅದನ್ನು ವಿಸ್ತರಿಸುತ್ತಾರೆ. ಇದರಿಂದ ನಿಮ್ಮ ಬರವಣಿಗೆಗೆ ಬೆಲೆ ಬರುತ್ತದೆ. ಅಸತ್ಯ ವಿಚಾರಗಳಿಗೆ ಓದುಗ ಪ್ರತಿಕ್ರಿಯೆ ನೀಡುತ್ತಾನೆ ಎಂದರೆ ವಿಚಾರ ಮತ್ತೂ ವಿಸ್ತಾರ ಆಗುತ್ತದೆ. ಇದು ವಿಚಾರದಲ್ಲಿರುವ ವ್ಯಕ್ತಿ ಮೇಲೆ ಪ್ರಭಾವ ಬೀರುತ್ತದೆ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.