ಹಾವೇರಿ : ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲೂ ನಾಳೆ ಮತ ಎಣಿಕೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.
ದೇವಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಹಾವೇರಿ ಜಿಲ್ಲಾಡಳಿತ ಪೂರ್ವ ತಯಾರಿ ನಡೆಸಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಯಾಸೀರ್ ಖಾನ್ ಪಠಾಣ್ ಸ್ಪರ್ಧಿಸಿದ್ದಾರೆ.
ಭರತ ಬೊಮ್ಮಾಯಿ ಎದುರಾಳಿಯಾಗಿದ್ದ ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿನ ಮೂಲಕ ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಬೇಕೆಂದು ಸಚಿವ ಸತೀಶ್ ಜಾರಕಹೊಳಿ ನೇತೃತ್ದ ಇಡೀ ತಂಡವೇ ಶಿಗ್ಗಾಂವಿಯಲ್ಲಿ ಬೀಡುಬಿಟ್ಟಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ಮಾಡಿದ್ದರು. ಶಿಗ್ಗಾಂವಿ ಮತಕ್ಷೇತ್ರದಲ್ಲಿ ಶೇ.88.48ರಷ್ಟು ಮತದಾನ ನಡೆದಿತ್ತು. ಈಗಾಗಲೇ ಎವಿಎಂ ಮಷಿನ್ಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.