ಚಿಕ್ಕೋಡಿ: ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ನಾಯಕತ್ವವನ್ನ ಜನ ತಿರಸ್ಕಾರ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಹರಿಹಾಯ್ದರು.
ಭರತ ಬೊಮ್ಮಾಯಿ ಸೋಲು ನಿಜಕ್ಕೂ ಆಘಾತ ತಂದಿದೆ. ರೌಡಿಯನ್ನ ಜನ ಆಯ್ಕೆ ಮಾಡಿದ್ದಾರೆ. ಜನರ ತೀರ್ಪು ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಿದೆ. ಹೊಸ ನಾಯಕತ್ವ ರಾಜ್ಯಕ್ಕೆ ಮತ್ತು ಬಿಜೆಪಿಗೆ ಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸೋಲು ದುರ್ದೈವ. ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಪಾಪ ಕೊನೆಯ ವರೆಗೂ ಯೋಗೇಶ್ವರ್ ಬಿಜೆಪಿ ಪರ ಒಲವು ತೋರಿದ್ದರು. ಜನ ಯೋಗೇಶ್ವರ್ ಕೆಲಸ ಮಾಡಿದ್ದನ್ನ ನೋಡಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು ಮುಂದೆ ಯೋಚನೆ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಇನ್ನಾದರೂ ಬಿಜೆಪಿ, ಜೆ.ಪಿ.ನಡ್ಡಾ ಅವರು ಕಣ್ಣು ತೆರೆಯಬೇಕು ಎಂದು ಹೇಳಿದರು.