ಪಾಕಿಸ್ತಾನದಲ್ಲಿ ಜನ ಆರ್ಥಿಕ ಸ್ಥಿತಿಯಿಂದಾಗಿ ಹೈರಾಣಾಗಿದ್ದಾರೆ. ಒಂದು ಹೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ದಕ್ಷಿಣ ಪಾಕಿಸ್ತಾನದ ಕರಾಚಿಯಲ್ಲಿ ಉಚಿತ ಪಡಿತರ ವಿತರಿಸುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ.
`ಪಡಿತರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಪ್ರಜ್ಞಾಹೀನರಾಗಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್ಪ್ರೆಸ್ ನ್ಯೂಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಈ ಘಟನೆಯು ಕರಾಚಿಯ SITE (ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ನಡೆದಿದ್ದು, ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಮುಸ್ಲಿಂಮರ ಪವಿತ್ರ ಹಬ್ಬವಾದ ರಂಜಾನ್ ಮಾಸ ಪ್ರಯುಕ್ತ ಪಡಿತರ ವಿತರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಉಚಿತ ಹಿಟ್ಟು ವಿತರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ನಾಲ್ಕು ವೃದ್ಧರು ಮೃತಪಟ್ಟಿದ್ದರು.