ಬೀದರ್:- ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದ ರೈತರಿಗೆ ವಕ್ಫ್ ನೋಟಿಸ್ ಜಾರಿ ಮಾಡಿರುವುದನ್ನು ಬಿಜೆಪಿ ಖಂಡಿಸಿದೆ.
ಮೊದಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆದರೆ, ಇದೀಗ ಬಿಜೆಪಿಯ ಮತ್ತೊಂದು ಟೀಂ ನಿಂದ ಇಂದಿನಿಂದ ಹೋರಾಟ ಶುರುವಾಗಲಿದೆ.
ಗಡಿ ಜಿಲ್ಲೆಯಲ್ಲಿ ಬಿಜೆಪಿ ರೆಬಲ್ಸ್ ಟೀಂ ಇಂದಿನಿಂದ ವಕ್ಫ್ ವಿರುದ್ಧ ಹೋರಾಟ ಆರಂಭಿಸಲಿದೆ. ʻವಕ್ಫ್ ಹಠಾವೋ ಭಾರತ್ ದೇಶ್ ಬಚಾವೋʼ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಂ ಹೋರಾಟ ನಡೆಸಲಿದೆ.
ಇಂದು ಬೆಳಗ್ಗೆ 9 ಗಂಟೆ ವೇಳೆಗೆ ನಗರದ ಝರಣಿ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಕ್ಫ್ ವಿರುದ್ಧ ಹೋರಾಟ ಶುರು ಮಾಡಲಿದೆ. ಈ ಹೋರಾಟ ಡಿಸೆಂಬರ್ 1ರ ವರೆಗೆ ಐದು ಜಿಲ್ಲೆಗಳಲ್ಲಿ ನಡೆಯಲಿದೆ. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ನಿಂದಾಗಿರುವ ಸಮಸ್ಯೆಗಳ ಕುರಿತು ಗಮನ ಸೆಳೆಯಲಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಬೀದರ್ ತಾಲೂಕಿನ ಧರ್ಮಾಪುರ, ಚಟ್ನಳ್ಳಿ ಗ್ರಾಮಗಳಿಗೆ ರೆಬಲ್ಸ್ ಟೀಂ ಭೇಟಿ ನೀಡಲಿದೆ. ಅಲ್ಲಿ ವಕ್ಫ್ನಿಂದ ತೊಂದರೆಗೆ ಒಳಗಾದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದೆ. ಕೆಲ ದಿನಗಳ ಹಿಂದೆಯಷ್ಟೇ 26 ಎಕ್ರೆಯ ಇಡೀ ಗ್ರಾಮವೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿತ್ತು, ಇದರಿಂದ ಜನ ಕಂಗಾಲಾಗಿದ್ದರು. ಹಾಗಾಗಿ ಇಲ್ಲಿನ ಜನರೊಟ್ಟಿಗೆ ರೆಬಲ್ಸ್ ಟೀಂ ಸಮಾಲೋಚನೆ ನಡೆಸಲಿದೆ.