ನವದೆಹಲಿ:- ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದೆ. ಇಂದಿನ ಅಧಿವೇಶನದಲ್ಲಿ ಎನ್ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಇನ್ನೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಹೊಸ ಮಸೂದೆಗಳನ್ನ ಮಂಡಿಸಲು ಸಜ್ಜಾಗಿದೆ. ಅದರಲ್ಲೂ ಅತಿಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಪ್ರಮುಖವಾಗಿದೆ. ವಿಪಕ್ಷಗಳು ಮೋದಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನಕ್ಕೆ ತೆರೆಬಿದ್ದಿದೆ.
ಮರಾಠ ನೆಲದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಫಲಿತಾಂಶ ಹೊರ ಬೀಳ್ತಿದ್ದಂತೆ ಇವತ್ತಿನಿಂದ ಪಾರ್ಲಿಮೆಂಟ್ ಅಧಿವೇಶನದ ಕದನ ಶುರುವಾಗಲಿದೆ. ಮಹತ್ವದ ಮಸೂದೆಗಳನ್ನ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ಇವತ್ತಿನಿಂದ ಸದನ ಕದನ ಕೌತುಕ ಹೆಚ್ಚಾಗಲಿದೆ.
ಇಂದಿನಿಂದ ಡಿ.20ರ ವರೆಗೆ ಕಲಾಪ ನಡೆಯಲಿದೆ. ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಜೊತೆಗೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಅದನ್ನು ಕೂಡ ಯಾವುದೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಈ ವೇಳೆ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ