ಹಾಸನ: ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕೊರಟಗೆರೆ ಗ್ರಾಮದಲ್ಲಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ತಂದೆ ಸಾವನ್ನಪ್ಪಿ, ಮಗಳ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ದಯಾನಂದ (46) ಮೃತ ವ್ಯಕ್ತಿಯಾಗಿದ್ದು, ಎಸ್ಎಸ್ಎಲ್ಸಿ ಓದುತ್ತಿದ್ದ ಮಗಳು ನಿಶ್ಮಿತಾ (16) ಗಂಭಿರ ಗಾಯಗೊಂಡ ಬಾಲಕಿಯಾಗಿದ್ದಾಳೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ದಯಾನಂದ, ಬೇಲೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.
ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ದಯಾನಂದ, ಇಂದು ಮಗಳನ್ನು ಶಾಲೆಗೆ ಬಿಡಲು ಹಾಗೂ ಬಟ್ಟೆ ಅಂಗಡಿ ತೆರೆಯಲು ವಾಪಾಸ್ ಬೇಲೂರಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಡಿಕೆ ತೋಟಕ್ಕೆ ಕಾರು ಬಿದ್ದಿದೆ.
ಈ ವೇಳೆ ಸ್ಥಳದಲ್ಲೇ ದಯಾನಂದ ಸಾವನ್ನಪ್ಪಿದ್ದು, ಮಗಳಿಗೆ ಬೇಲೂರಿನ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.