ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಕರ್ತವ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಶಾಸಕ ಗವಿಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ.
ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಕರ್ತವ್ಯ. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ ಎಂದರು.
ಅದಾನಿ ವಿಷಯ ರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿದ್ದು. ಅಮೆರಿಕನ್ ಎಸ್ಟಬ್ಲಿಷ್ಮೆಂಟ್ಸ್ ಯಾವ ರೀತಿ ಅವರ ಕಂಪನಿ ನಡೆದುಕೊಳ್ಳುತ್ತಿದೆ ಎಂಬುದನ್ನು ತೋರಿಸಿದೆ. ಈ ಬಗ್ಗೆ ಅದಾನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡುವುದರಲ್ಲಿ ತಪ್ಪೇನಿದೆ? ರಾಹುಲ್ ಗಾಂಧಿಯವರು ಪ್ರತಿಯೊಂದು ಭಾಷಣದಲ್ಲಿ ಹೇಳಿಕೊಂಡು ಬಂದಿದ್ದಾರೆ.
ಅದಾನಿ ಅವರು ಅನೇಕ ಅವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸುತ್ತಿದ್ದೀರಿ ಎಂದು ಪ್ರಧಾನಿಯವರಿಗೆ ನೇರವಾಗಿ ಹೇಳಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಕಾಂಗ್ರೆಸ್ ಪಕ್ಷ ಚರ್ಚಿಸಲು ಅವಕಾಶ ಕೇಳುವುದು ತಪ್ಪೇನಿದೆ ಎಂದು ಪ್ರಶ್ನಿಸಿದರು.