ಮಂಡ್ಯ: ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಮಂಡ್ಯ ಬಿಜೆಪಿ ಕಾರ್ಯಕರ್ತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿರುವ ಯತ್ನಾಳ್ ವಿರುದ್ಧ ಪತ್ರ ಚಳವಳಿ ಆರಂಭಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ಪತ್ರ ಚಳವಳಿ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ದೂರಿನ ಪತ್ರಕ್ಕೆ ಕಾರ್ಯಕರ್ತರು ರಕ್ತದ ಸಹಿ ಹಾಕಿ ರವಾನೆ ಮಾಡಿದ್ದಾರೆ. ಈ ವೇಳೆ ಪಕ್ಷವನ್ನು ಇಬ್ಭಾಗ ಮಾಡುತ್ತಿರುವ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಧಿಕ್ಕಾರ ಕೂಗಿದ್ದಾರೆ.
ವಕ್ಫ್ ಬೋರ್ಡ್ ವಿಚಾರದಲ್ಲಿ ಯತ್ನಾಳ್ ಹೋರಾಟ ಮಾಡುತ್ತಿದ್ದಾರೆ. ಆದರೆ ಅದು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿಯೋ ಅಥವಾ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ದವೋ ಗೊತ್ತಾಗುತ್ತಿಲ್ಲ. ಯತ್ನಾಳ್ ಅವರ ಮಾತಿಗೆ ಕಡಿವಾಣ ಹಾಕಬೇಕು. ಯತ್ನಾಳ್ ಮಾತಿನಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ.ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ, ಬಿಎಸ್ ವೈ ಅಭಿಮಾನಿಗಳಿಗೆ ನೋವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.