2025 ರ ಋತುವಿನ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಕಳೆದ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಹಣದ ಸುರಿಮಳೆಯಾಯಿತು. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹರಾಜಿನ ಮೋಜು ಎದುರಾಗಲಿದ್ದು, ಮುಂದಿನ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗಾಗಿ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ನಡೆಯಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 5 ತಂಡಗಳು ಪಾಲ್ಗೋಳುತ್ತಿವೆ. ಅದರಲ್ಲಿ ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು. ಇದೇ ತಿಂಗಳ ಆರಂಭದಲ್ಲಿ ಎಲ್ಲಾ ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಪ್ರಕಟಿಸಿದ್ದವು. ಭಾಗಶಃ ತಂಡಗಳು ತಮ್ಮ ಕೋರ್ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಆಲ್ ರೌಂಡರ್ ಸ್ನೇಹ್ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಹಲವು ಯುವ ಆಟಗಾರ್ತಿಯರ ಮೇಲೂ ತಂಡಗಳು ಕಣ್ಣಿಡಲಿವೆ.