ನಟಿ ನಯನತಾರಾ ಹಾಗೂ ಧನುಷ್ ನಡುವೆಯ ಕಿತ್ತಾಟ ಬೀದಿಗೆ ಬಿದ್ದಿದೆ. ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳ ಬಳಕೆಗೆ ಧನುಷ್ ಅವಕಾಶ ನೀಡಿಲ್ಲ ಎಂದು ನಯನತಾರಾ ಸಿಟ್ಟಾಗಿದ್ದರು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಓಪನ್ ಲೆಟರ್ ಬರೆದು ಆಕ್ರೋಶ ಹೊರ ಹಾಕಿದ್ದರು. ಇದೀಗ ಕರ್ಮದ ಬಗ್ಗೆ ಕೆಲ ಸಾಲುಗಳನ್ನು ನಯನತಾರಾ ಹಂಚಿಕೊಂಡಿದ್ದು, ಈ ವಿಚಾರ ಚರ್ಚೆ ಹುಟ್ಟುಹಾಕಿದೆ.
ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪೋಸ್ಟ್ ಹಾಕಿರುವ ನಟಿ ನಯನತಾರಾ, ‘ಕರ್ಮ ಹೇಳುತ್ತದೆ: ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ನಾಶ ಮಾಡಿದರೆ ಅದನ್ನು ಸಾಲದ ರೀತಿ ಸ್ವೀಕರಿಸು. ನಂತರ ಬಡ್ಡಿ ಸಮೇತ ಅದು ನಿನಗೆ ಬರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.
ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅವರಿಗೆ ಕೋರ್ಟ್ ಅಧಿಕೃತವಾಗಿ ವಿಚ್ಚೇದನ ನೀಡಿದೆ. ಇದೇ ವಿಚಾರವನ್ನು ಇಟ್ಟುಕೊಂಡು ನಯನತಾರಾ ಅವರು ಈ ರೀತಿಯ ಪೋಸ್ಟ್ ಮಾಡಿದರೆ ಎನ್ನುವ ಕುತೂಹಲ ಅನೇಕರಿಗೆ ಮೂಡಿದೆ.
ನಯನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಮದುವೆ ಆದರು. ಇವರ ಮದುವೆಯನ್ನು ಡ್ಯಾಕ್ಯುಮೆಂಟರಿ ರೀತಿ ಮಾಡಿ ನೆಟ್ಫ್ಲಿಕ್ಸ್ಗೆ ಕೊಡಲಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಸೇರಿಸಲು ತಾವು ಹಾಗೂ ವಿಘ್ನೇಶ್ ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳನ್ನು ನಯನತಾರಾ ಅವರು ಧನುಶ್ ಬಳಿ ಕೇಳಿದ್ದರು. ಆದರೆ, ಇದಕ್ಕೆ ಧನುಶ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ನಯನತಾರಾ ಹಾಗೆಯೇ ದೃಶ್ಯಗಳ ಬಳಕೆ ಮಾಡಿಕೊಂಡಿದ್ದರು. ಇದರಿಂದ ಧನುಶ್ ಕಾನೂನು ಹೋರಾಟಕ್ಕೆ ಮುಂದಾದರು. ಇದರಿಂದ ಸಿಟ್ಟಾದ ನಯನತಾರಾ ಅವರು ಉದ್ದನೆಯ ಸಾಲುಗಳನ್ನು ಬರೆದುಕೊಂಡು ಆಕ್ರೋಶ ಹೊರ ಹಾಕಿದ್ದರು.