ಮಡಿಕೇರಿ: ಅಕ್ರಮವಾಗಿ ಗಾಂಜಾ (Ganja) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿರಾಜಪೇಟೆಯಲ್ಲಿ (Virajpet) ನಡೆದಿದೆ.
ವಿರಾಜಪೇಟೆ ತಾಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೋರೆ ನಿವಾಸಿ ಪ್ರವೀಣ (31) ಹಾಗೂ ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೋನು (22) ಬಂಧಿತ ಆರೋಪಿಗಳು. ಪ್ರಕರಣದ ಎರಡನೇ ಆರೋಪಿಯಾಗಿರುವ ಸೋನು 2020ರಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ. ಅಲ್ಲದೇ ಜೈಲುವಾಸದ ಸಮಯದಲ್ಲಿ ಅನೇಕ ಮಂದಿಯ ಪರಿಚಯವಾಗಿದ್ದು, ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಈತನಿಗೆ ಖಚಿತ ಮಾಹಿತಿ ಇತ್ತು ಎನ್ನಲಾಗಿದೆ.
ಸೋನು ತನ್ನ ಸ್ನೇಹಿತನಾದ ಪ್ರವೀಣ್ಗೂ ಮಾಹಿತಿ ತಿಳಿಸಿ ಹಣ ಹೊಂದಿಸಿಕೊಂಡು ಮೈಸೂರಿಗೆ ತೆರಳಿದ್ದಾನೆ. ಮಾರ್ಚ್ 30ರ ರಾತ್ರಿ ವೇಳೆಯಲ್ಲಿ ಮೈಸೂರಿನ (Mysuru) ಹೊರವಲಯದಲ್ಲಿ ಗಾಂಜಾ ಖರೀದಿಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾನೆ. ಮಾರ್ಚ್ 31ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಆರೋಪಿಗಳು ತಮ್ಮ ಬಳಿಯಿದ್ದ ಗಾಂಜಾವನ್ನು ಮಾರಾಟ ಮಾಡಲು ವಿರಾಜಪೇಟೆಯ ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದ ಮುಂಭಾಗದಲ್ಲಿ ಗಿರಾಕಿಗಳಿಗೆ ಹೊಂಚು ಹಾಕುತ್ತಿದ್ದರು.
ನಿಖರ ಮಾಹಿತಿಯ ಅನ್ವಯ ಪೊಲೀಸರು ಆರೋಪಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರ ಕೈಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದ್ದ 1.222 ಕೆಜಿ ಗಾಂಜಾ ಮತ್ತು 770 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಗಾಂಜಾ ಸುಮಾರು 30 ಸಾವಿರ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ 20/ಬಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.