ಬಾಲಿವುಡ್ ನಟ ವಿಕ್ರಾಂತ್ ಮಾಸಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಸಿನಿಮಾ ನೋಡಿದ ಮೋದಿ ಚಿತ್ರದ ಕುರಿತು ಮೆಚ್ಚಿಕೊಂಡಿದ್ದಾರೆ. ಸಚಿವರು, ಸಂಸದರು ಹಾಗೂ ಚಿತ್ರತಂಡದವರು ಕೂಡ ಭಾಗಿ ಆಗಿದ್ದರು. ಸಿನಿಮಾ ವೀಕ್ಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಅವರು ‘ದಿ ಸಾಬರಮತಿ ರಿಪೋರ್ಟ್’ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ.
ಧೀರಜ್ ಅವರು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಮೂಲ್ ವಿ. ಮೋಹನ್, ಅನ್ಶೂಲ್ ಮೋಹನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಕ್ರಾಂತ್ ಮಾಸಿ, ರಾಶಿ ಖನ್ನಾ, ರಿಧಿ ಡೋಗ್ರ, ಬರ್ಕಾ ಸಿಂಗ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರತಂಡದ ಪ್ರಯತ್ನವನ್ನು ಮೋದಿ ಹೊಗಳಿದ್ದಾರೆ.
ಸಿನಿಮಾ ವೀಕ್ಷಿಸಿದ ನಂತರ ನರೇಂದ್ರ ಮೋದಿ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಎನ್ಡಿಎ ಸಂಸದರ ಜೊತೆಗೂಡಿ ದಿ ಸಾಬರಮತಿ ರಿಪೋರ್ಟ್ ಸಿನಿಮಾ ನೋಡಿದೆ. ಚಿತ್ರತಂಡದ ಪ್ರಯತ್ನಕ್ಕೆ ನಾನು ಶ್ಲಾಘನೆ ವ್ಯಕ್ತಪಡಿಸುತ್ತೇನೆ’ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. ಅವರಿಂದ ಈ ಹೊಗಳಿಕೆ ಸಿಕ್ಕದ್ದಕ್ಕೆ ‘ದಿ ಸಾಬರಮತಿ ರಿಪೋರ್ಟ್’ ಚಿತ್ರತಂಡದವರಿಗೆ ತುಂಬ ಖುಷಿ ಆಗಿದೆ.
ನರೇಂದ್ರ ಮೋದಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಜೆಪಿ ನಡ್ಡಾ ಕೂಡ ಸಿನಿಮಾ ವೀಕ್ಷಿಸಿದರು. ಚಿತ್ರತಂಡದವರಾದ ವಿಕ್ರಾಂತ್ ಮಾಸಿ, ಏಕ್ತಾ ಕಪೂರ್, ರಿದ್ಧಿ ಡೋಗ್ರ, ನಿರ್ದೇಶಕ ಧೀರಜ್ ಮುಂತಾದವರು ಸಹ ಮೋದಿ ಜೊತೆ ಕುಳಿತು ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಕ್ರಾಂತ್ ಮಾಸಿ ಅವರು, ‘ಇದು ತುಂಬ ಭಿನ್ನ ಅನುಭವ. ನನಗೆ ತುಂಬ ಖುಷಿ ಆಗಿದೆ. ಈ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಜೊತೆ ಕುಳಿತು ಸಿನಿಮಾ ನೋಡಿದ್ದು, ನನ್ನ ವೃತ್ತಿಜೀವನದ ಉತ್ತುಂಗ ಕ್ಷಣ’ ಎಂದು ಹೇಳಿದ್ದಾರೆ.
‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಿಡುಗಡೆ ಆದಾಗ ಕೂಡ ಮೋದಿ ಅವರು ಟ್ವೀಟ್ ಮಾಡಿದ್ದರು. ‘ಜನಸಾಮಾನ್ಯರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಕ್ಷಣಿಕ ಕಾಲದವರೆಗೆ ಮಾತ್ರ ಸುಳ್ಳಿನ ನಿರೂಪಣೆ ಇರಬಹುದು. ಅಂತಿಮವಾಗಿ ಸತ್ಯ ಹೊರಗೆ ಬರುತ್ತದೆ’ ಎಂದು ಅವರು ಪೋಸ್ಟ್ ಮಾಡಿದ್ದರು. 2002ರ ಫೆಬ್ರವರಿ 27ರಂದು ನಡೆದ ಗೋದ್ರಾ ರೈಲು ದುರಂತದ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಮೂಡಿಬಂದಿದೆ. ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.