ಧಾರವಾಡ: ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಲಿಂಬಿಕಾಯಿ ಪಕ್ಷ ಸೇರ್ಪಡೆಗೆ ಯಾವುದೇ ವಿರೋಧವಿಲ್ಲ. ಆದರೆ, ಅವರು ಪಕ್ಷ ಸೇರ್ಪಡೆ ಬೆನ್ನಲ್ಲೇ ಅವರಿಗೆ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲು ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ಡಾ.ಮಯೂರ್ ಮೋರೆ, ನಾಗರಾಜ ಗೌರಿ ಸೇರಿದಂತೆ ಒಟ್ಟು 11 ಜನ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಪ್ರಜಾಧ್ವನಿ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ 11 ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಲಾಗುವುದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಆಕಾಂಕ್ಷಿಗಳು ಕೂಡ ಒಪ್ಪಿಗೆ ಸೂಚಿದ್ದರು. ಆದರೆ, ಇದೀಗ ಈ 11 ಜನ ಅಭ್ಯರ್ಥಿಗಳನ್ನು ಬಿಟ್ಟು ಅರವಿಂದ ಬೆಲ್ಲದ ಅವರ ವಿರುದ್ಧ ಮೋಹನ ಲಿಂಬಿಕಾಯಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ ಹನ್ನೊಂದೂ ಜನ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್ ಕೊಡದಂತೆ ಹೈಕಮಾಂಡ್ವರೆಗೂ ನಾವು ಹೋಗಿ ಮನವಿ ಮಾಡುತ್ತೇವೆ. ಒಂದು ವೇಳೆ ಅವರಿಗೇ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ನಮ್ಮ ಹನ್ನೊಂದೂ ಜನ ಸೇರಿ ನಮ್ಮ ನಿರ್ಧಾರ ಸ್ಪಷ್ಟಪಡಿಸುತ್ತೇವೆ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಹೀಗಾಗಿ 11 ಜನರಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು. ಯಾವ ಲಿಂಬಿಕಾಯಿ, ಬದನೆಕಾಯಿಗೂ ಟಿಕೆಟ್ ನೀಡಬಾರದು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮೋಹನ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಧಾರವಾಡ ಕಾಂಗ್ರೆಸ್ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಕ್ಷದ ವರೀಷ್ಠರು ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ವರದಿ: ಕಲ್ಮೇಶ ಮಂಡ್ಯಾಳ, ಹುಬ್ಬಳ್ಳಿ ಧಾರವಾಡ