ಮಂಡ್ಯ : ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಾವಳಿ, ನಕಲಿ ದಾಖಲೆ, ವಂಚನೆ ತಡೆದು ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ 15 ದಿನಗಳ ಒಳಗೆ ಜಿಲ್ಲಾದ್ಯಂತ ಕಾವೇರಿ – 2 ತಂತ್ರಾಂಶವನ್ನು ಜಾರಿಗೆ ತರಲಾಗುವುದು ಎಂದು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಇನಾಮ್ದಾರ್ ಹೇಳಿದರು.
ಮದ್ದೂರು ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ಶನಿವಾರ ಕಾವೇರಿ – 2 ತಂತ್ರಾಂಶಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇವೆಗಳ ಬಗ್ಗೆ ಸಾರ್ವಜನಿಕರಿಂದ ಪ್ರತಿದಿನ ಒಂದಿಲ್ಲೊಂದು ದೂರುಗಳು ಕೇಳಿ ಬರುತ್ತಿದ್ದವು. ನೂತನ ಕಾವೇರಿ -2 ತಂತ್ರಾಂಶದಿಂದ ಇನ್ನು ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ ಹಾಗೂ ಸಾರ್ವಜನಿಕರಿಗೆ ಸೇವೆಗಳು ಸುಲಭವಾಗಲಿವೆ ಎಂದರು.
ನಕಲಿ ದಾಖಲೆಗಳನ್ನು ನೀಡಿ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ, ಸಾರ್ವಜನಿಕರು ಕಚೇರಿಗೆ ಬಂದು ದಿನವಿಡಿ ಕಾಯುವುದು ತಪ್ಪಲಿದೆ. ಮನೆಯಲ್ಲೇ ಕುಳಿತು ಸಂಬಂಧಪಟ್ಟ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಿ, ನಿಗದಿ ಪಡಿಸಿದ ದಿನದಂದು ಕಚೇರಿಗೆ ಬಂದು ಭಾವಚಿತ್ರ, ಹೆಬ್ಬೆಟ್ಟಿನ ಗುರುತು ನೀಡಿದ ನಂತರ ನೋಂದಣಿ ಮಾಡಲಾಗುವುದು. ಈ ಪ್ರಕ್ರಿಯೆ 10 ನಿಮಿಷಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.
3 ಹಂತದಲ್ಲಿ ನಡೆಯುವ ನೋಂದಣಿ ಪ್ರಕ್ರಿಯೆ
1 ನಾಗರಿಕರು ನೋಂದಣಿ ಕಚೇರಿಗೆ ಹಾಜರಾಗುವ ಮುನ್ನ ಎಲ್ಲ ಡೇಟಾ ಮತ್ತು ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ಕಚೇರಿಗೆ ಕಳುಹಿಸಬೇಕು.
ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಗದಿತ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಲು ತಿಳಿಸಲಾಗುತ್ತದೆ.
ನಂತರ ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ. ನಾಗರಿಕರು ತಮ್ಮ ಭಾವಚಿತ್ರ ಹೆಬ್ಬೆರಳು ಗುರುತನ್ನು ಸೆರೆ ಹಿಡಿಯುವ ಸಂಬಂಧ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಉಪನೋಂದಣಿ ಕಚೇರಿಗೆ ಬರಬೇಕು.
2 ನೋಂದಣಿ ಪ್ರಕ್ರಿಯೆ 10 ನಿಮಿಷಗಳಲ್ಲಿ ಮುಗಿಯಲಿದೆ.
3 ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿರುವ ದಸ್ತಾವೇಜನ್ನು ನಾಗರಿಕರ ಲಾಗಿನ್ಗೆ ಹಾಗೂ ಅವರ ಡಿಜಿ ಲಾಕರ್ ಖಾತೆಗೆ ಕಳುಹಿಸಿ ಕೊಡಲಾಗುವುದು ಎಂದರು.
ಕಾವೇರಿ – 2 ತಂತ್ರಾಂಶವನ್ನು ಇತರೆ ಇಲಾಖೆಯ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿದೆ. ಕೃಷಿ ಜಮೀನುಗಳ ವಿವರ ಪಡೆಯಲು ಭೂಮಿ ಗ್ರಾಮೀಣ ಹಾಗೂ ನಗರ ಪ್ರದೇಶದ ಕೃಷಿಯೇತರ ಸ್ವತ್ತುಗಳಿಗೆ ಇ-ಸ್ವತ್ತು ಸೇರಿದಂತೆ ಸಕಾಲ, ಖಜಾನೆ-2 ತಂತ್ರಾಂಶಗಳೊಂದಿಗೆ ಸಂಯೋಜಿಸಿರುವುದರಿಂದ ಸಾರ್ವಜನಿಕರಿಗೆ ಮೋಸವಾಗದಂತೆ ನೋಂದಣಿ ತಡೆಯಬಹುದಾಗಿದೆ. ನೋಂದಾಯಿತ ದಸ್ತಾವೇಜಿನ ವಿವರಗಳನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಮ್ಯೂಟೇಶನ್ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಉಪ ನೋಂದಣಾಧಿಕಾರಿ ದಿನೇಶ್, ಸಿಬ್ಬಂದಿಗಳಾದ ಲಕ್ಷ್ಮಿ, ಅನಿಲ್, ನರೇಂದ್ರ, ನಿವೇದ್, ಸುನೀಲ್, ಅನಿಲ್ ಪತ್ರ ಬರಹಗಾರರಾದ ನಾಗೇಂದ್ರ, ಶ್ರೀಕಂಠಯ್ಯ, ಬಾಲು, ಚಿಕ್ಕಯ್ಯ, ಸತೀಶ್, ಶ್ರೀನಿಧಿ, ಮಧು, ಮಹದೇವ್, ಶಿವಲಿಂಗಯ್ಯ, ಶಶಿ, ಸದಾನಂದ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ