ಕರಾಚಿ: ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹ ಮಾಡುತ್ತಿರುವುದನ್ನು ಖಂಡಿಸಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕರಾಚಿ ಪ್ರೆಸ್ ಕ್ಲಬ್ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ನಡೆದ ಪ್ರತಿಭಟನೆಯನ್ನು ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ (ಪಿಡಿಐ) ಆಯೋಜಿಸಿತ್ತು.
ಈ ವೇಳೆ ಮಾತನಾಡಿದ ಪಿಡಿಐ ನಾಯಕ “ಹಾಡಹಗಲೇ 12, 13 ವರ್ಷದ ಹಿಂದೂ ಬಾಲಕಿಯರನ್ನು ಅಪಹರಣ ಮಾಡಲಾಗುತ್ತಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಅನಂತರ ವಯಸ್ಸಾದ ಪುರುಷನೊಂದಿಗೆ ಮದುವೆ ಮಾಡಲಾಗುತ್ತದೆ. ಹಿಂದೂ ಬಾಲಕಿಯರು, ಮಹಿಳೆಯರ ರಕ್ಷಣೆಗೆ ಪಾಕ್ ಸರಕಾರ ಕಠಿನ ಕಾನೂನು ಜಾರಿಗೆ ತರಬೇಕು,’ ಎಂದು ಆಗ್ರಹಿಸಿದ್ದಾರೆ.
ಕೆಲವು ತಿಂಗಳಿಂದ ಈಚೆಗೆ ಸಿಂಧ್ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಂಡಿವೆ. ಹಿಂದೂ ಯುವತಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹವನ್ನು ತಡೆಯಲು ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಭಿತ್ತಿಪತ್ರಗಳನ್ನು ಪ್ರತಿಭಟನಕಾರರು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.